ಗ್ಲೆನ್ ಫಿಲಿಪ್ಸ್ ನ್ಯೂಝಿಲೆಂಡ್‌ನ ಜೂನಿಯರ್ ಮೆಕಲಮ್!

ವೆಲ್ಲಿಂಗ್ಟನ್, ಫೆ.15: ದಕ್ಷಿಣ ಆಫ್ರಿಕ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ನ್ಯೂಝಿಲೆಂಡ್ ಇಲೆವೆನ್ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದ 20ರ ಹರೆಯದ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಗ್ಲೆನ್ ಫಿಲಿಪ್ಸ್ ಭವಿಷ್ಯದ ಬ್ರೆಂಡನ್ ಮೆಕಲಮ್ ಎಂದೇ ಗುರುತಿಸಿಕೊಂಡಿದ್ದಾರೆ. ಅಭ್ಯಾಸ ಪಂದ್ಯಕ್ಕೆ ಮಳೆ ಅಡ್ಡಿಪಡಿಸದೇ ಇದ್ದಿದ್ದರೆ ದಕ್ಷಿಣ ಆಫ್ರಿಕದ ಬಲಿಷ್ಠ ಬೌಲಿಂಗ್ ದಾಳಿ ಎದುರಿಸುವ ಅವಕಾಶ ಸಿಗುತ್ತಿತ್ತು.
18ರ ಹರೆಯದಲ್ಲಿ ಆಕ್ಲಂಡ್ ತಂಡದ ಪರ ಚೊಚ್ಚಲ ಪಂದ್ಯ ಆಡಿದ್ದ ಫಿಲಿಪ್ಸ್ 2016ರ ವಿಶ್ವಕಪ್‌ನಲ್ಲಿ ನ್ಯೂಝಿಲೆಂಡ್‌ನ ಅಂಡರ್-19 ತಂಡದಲ್ಲಿ ಆಡಿದ್ದರು. ವಿಶ್ವಕಪ್‌ನ 6 ಇನಿಂಗ್ಸ್‌ಗಳಲ್ಲಿ 2 ಅರ್ಧಶತಕ ಬಾರಿಸಿದ್ದರು.
ನ್ಯೂಝಿಲೆಂಡ್‌ನ ದೇಶೀಯ ಟ್ವೆಂಟಿ-20 ಟೂರ್ನಮೆಂಟ್ ಸೂಪರ್ ಸ್ಮಾಶ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿರುವ ಫಿಲಿಪ್ಸ್ 46.12ರ ಸರಾಸರಿಯಲ್ಲಿ 143.02ರ ಸ್ಟ್ರೈಕ್‌ರೇಟ್‌ನಲ್ಲಿ 10 ಇನಿಂಗ್ಸ್‌ಗಳಲ್ಲಿ 369 ರನ್ ಗಳಿಸಿದ್ದರು. ಇದರಲ್ಲಿ ಸೆಂಟ್ರಲ್ ಡಿಸ್ಟ್ರಿಕ್ಸ್ ತಂಡದ ವಿರುದ್ಧ 57 ಎಸೆತಗಳಲ್ಲಿ 116 ರನ್ ಸೇರಿದೆ. ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಡುವ ಮೊದಲೇ ನ್ಯೂಝಿಲೆಂಡ್ ಕಿರಿಯರ ತಂಡವನ್ನು ಪ್ರತಿನಿಧಿಸಿದ್ದ ಫಿಲಿಪ್ಸ್ ಐಪಿಎಲ್ ಹರಾಜಿನಲ್ಲಿ ಹೆಸರು ನೊಂದಾಯಿಸಿಕೊಂಡಿದ್ದರು.
ಪೂರ್ವ ಲಂಡನ್‌ನಲ್ಲಿ ಜಯಿಸಿರುವ ಫಿಲಿಪ್ಸ್ 5ನೆ ವರ್ಷದಲ್ಲಿ ತನ್ನ ಕುಟುಂಬದವರೊಂದಿಗೆ ನ್ಯೂಝಿಲೆಂಡ್‌ಗೆ ವಲಸೆ ಹೋಗಿದ್ದರು. ಆಕ್ಲಂಡ್‌ನ ಸಾಕ್ರೆಡ್ ಹಾರ್ಟ್ ಕಾಲೇಜ್‌ನಲ್ಲಿ ಎಲ್ಲ ವಯೋಮಿತಿಯ ಗ್ರೂಪ್‌ಮಟ್ಟದಲ್ಲಿ ಆಡಿದ್ದರು.
2016ರಲ್ಲಿ ಎಂಸಿಸಿ ಯಂಗ್ ಕ್ರಿಕೆಟರ್ಸ್ ಸ್ಕೀಮ್‌ನಲ್ಲಿ ಭಾಗವಹಿಸಿದ್ದ ಫೀಲಿಪ್ಸ್ ಎಂಸಿಸಿ ಪರವಾಗಿ ನಾಫೋರ್ಕ್ಸ್ ತಂಡದ ವಿರುದ್ಧ ಓವರ್‌ವೊಂದರಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿ ಗಮನ ಸೆಳೆದಿದ್ದರು. ಆ ಪಂದ್ಯದಲ್ಲಿ 123 ಎಸೆತಗಳಲ್ಲಿ ಅಜೇಯ 201 ರನ್ ಗಳಿಸಿ ಎಂಸಿಸಿ ತಂಡ 5 ವಿಕೆಟ್ ನಷ್ಟಕ್ಕೆ 299 ರನ್ ಗಳಿಸಲು ನೆರವಾಗಿದ್ದರು.
ನ್ಯೂಝಿಲೆಂಡ್ ಇಲೆವೆನ್ ತಂಡಕ್ಕೆ ಆಯ್ಕೆ ಸಮಿತಿಯು ತನ್ನನ್ನು ಆಯ್ಕೆ ಮಾಡಿರುವುದು ದೊಡ್ಡ ಗೌರವ. ಇದು ನನ್ನಜೀವನದ ಸ್ಮರಣೀಯ ಕ್ಷಣ. ನಾನು ನಿರೀಕ್ಷೆಯೇ ಮಾಡಿರಲಿಲ್ಲ ಎಂದು ಫಿಲಿಪ್ಸ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕ ವಿರುದ್ಧದ ಏಕದಿನ ಸರಣಿಗೆ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಬದಲಿಗೆ ಡಿಯನ್ ಬ್ರೌನ್ಲಿ ಆಯ್ಕೆಯಾಗಿದ್ದಾರೆ. ಒಂದು ವೇಳೆ ಕಿವೀಸ್ ಪಾಳಯದಲ್ಲಿ ಇನ್ನೊಬ್ಬ ಆಟಗಾರ ಗಾಯಗೊಂಡರೆ ಫಿಲಿಪ್ಸ್‌ಗೆ ಅವಕಾಶ ಲಭಿಸುವ ಸಾಧ್ಯತೆಯಿದೆ.







