ಶರಪೋವಾ ಟೆನಿಸ್‌ಗೆ ವಾಪಸಾಗಲು ಅರ್ಹರು: ಬೆಕರ್

ಮೊನಾಕೊ, ಫೆ.15: ಹದಿನೈದು ತಿಂಗಳ ನಿಷೇಧದ ಅವಧಿಯನ್ನು ಪೂರೈಸಿ ಎಪ್ರಿಲ್‌ಗೆ ಟೆನಿಸ್‌ಗೆ ವಾಪಸಾಗಲಿರುವ ರಶ್ಯದ ಟೆನಿಸ್ ತಾರೆ ಮರಿಯಾ ಶರಪೋವಾ ಎರಡನೆ ಅವಕಾಶಕ್ಕೆ ಅರ್ಹರಾಗಿದ್ದಾರೆ ಎಂದು ಟೆನಿಸ್ ದಂತಕತೆ ಬೊರಿಸ್ ಬೆಕರ್ ಅಭಿಪ್ರಾಯಪಟ್ಟಿದ್ದಾರೆ.
ಐದು ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ಆಗಿರುವ ಶರಪೋವಾ 2016ರ ಆಸ್ಟ್ರೇಲಿಯನ್ ಓಪನ್‌ನ ವೇಳೆ ನಿಷೇದಿತ ಉದ್ದೀಪನಾ ದ್ರವ್ಯ ಮೆಲ್ಡೋಡಿನಿಯಂ ಸೇವಿಸಿ ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಕಾರಣ ಅವರನ್ನು ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್(ಐಟಿಎಫ್) ಎರಡು ವರ್ಷಗಳ ಕಾಲ ನಿಷೇಧ ಹೇರಿತ್ತು.
ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯ(ಸಿಎಎಸ್) ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಶ್ಯದ ಆಟಗಾರ್ತಿಯ ನಿಷೇಧದ ಅವಧಿಯನ್ನು 9 ತಿಂಗಳಿಗೆ ಕಡಿತಗೊಳಿಸಿದ ಕಾರಣ ಎಪ್ರಿಲ್ 26ಕ್ಕೆ ಟೆನಿಸ್ ಅಂಗಳಕ್ಕೆ ವಾಪಸಾಗಲು ಮುಕ್ತರಾಗಿದ್ದಾರೆ.
ಶರಪೋವಾಗೆ ಕ್ರೀಡೆಗೆ ವಾಪಸಾಗಲು ಅವಕಾಶ ನೀಡಬೇಕಾಗಿದೆ. ಅವರ ಮರಳಿಕೆಯಿಂದ ಯಾವುದೇ ಸಮಸ್ಯೆಯಾಗುವ ವಿಶ್ವಾಸ ನನಗಿದೆ. ಅವರಿಗೆ ಎರಡನೆ ಬಾರಿ ಅವಕಾಶ ನೀಡಬೇಕಾಗಿದ್ದು, ಅವರು ಅದಕ್ಕೆ ಅರ್ಹರಿದ್ದಾರೆ. ದೀರ್ಘಸಮಯದಿಂದ ನಿಷೇಧದ ಶಿಕ್ಷೆ ಅನುಭವಿಸಿರುವ ಶರಪೋವಾ ತಪ್ಪಿಗೆ ಶಿಕ್ಷೆ ಅನುಭವಿಸಿದ್ದಾರೆ. ಇತರ ಆಟಗಾರರ ಪ್ರತಿಕ್ರಿಯೆ ಹೇಗಿರುತ್ತದೆಂದು ನನಗೆ ಗೊತ್ತಿಲ್ಲ. ಪ್ರತಿಯೊಬ್ಬರೂ ತನ್ನದೇ ಆದ ಆಯ್ಕೆ ಹೊಂದಿರುತ್ತಾರೆ. ಲಾಕರ್‌ರೂಮ್ ಒಳಗಿನ ವಾತಾವರಣ ಚೆನ್ನಾಗಿದೆ ಎಂದು ನನ್ನ ಭಾವನೆ’’ ಎಂದು ಮೂರು ಬಾರಿಯ ವಿಂಬಲ್ಡನ್ ಚಾಂಪಿಯನ್ ಬೆಕೆರ್ ಹೇಳಿದರು.
‘‘ಐಟಿಎಫ್‌ನ 2 ವರ್ಷಗಳ ನಿಷೇಧದ ತೀರ್ಪು ಅತ್ಯಂತ ಕ್ರೂರವಾಗಿತ್ತು. ನಾನು ಉದ್ದೇಶಪೂರ್ವಕವಾಗಿ ಡೋಪಿಂಗ್ ತಡೆ ನಿಯಮವನ್ನು ಉಲ್ಲಂಘಿಸಿರಲಿಲ್ಲ’’ ಎಂದು 29ರ ಪ್ರಾಯದ ಶರಪೋವಾ ಹೇಳಿದ್ದಾರೆ.
2016ರ ಆರಂಭದಲ್ಲಿ ಮೆಲ್ಡೊಡಿಯಂನ್ನು ವಿಶ್ವ ಉದ್ದೀಪನಾ ತಡೆ ಘಟಕ ನಿಷೇಧಿತ ದ್ರವ್ಯದ ಪಟ್ಟಿಗೆ ಸೇರಿಸಿತ್ತು. ಈ ದ್ರವ್ಯ ರಕ್ತ ಸಂಚಲನದಲ್ಲಿ ವೇಗ ಹಾಗೂ ಪ್ರದರ್ಶನದಲ್ಲಿ ಉತ್ತೇಜನ ನೀಡುತ್ತದೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ ವಾಡಾ ಈ ದ್ರವ್ಯವನ್ನು ನಿಷೇಧಿಸಿತ್ತು.







