ತಮಿಳುನಾಡು ರಾಜಕೀಯ ಕಸರತ್ತಿಗೆ ತೆರೆ: ಇಂದು ಸಂಜೆ ನೂತನ ಸರಕಾರ ಅಸ್ತಿತ್ವಕ್ಕೆ
ನೂತನ ಮುಖ್ಯಮಂತ್ರಿಯಾಗಿ ಪಳನಿಸ್ವಾಮಿ ಪ್ರಮಾಣ ವಚನ ಸ್ವೀಕಾರ

ಚೆನ್ನೈ, ಫೆ.16: ಕಳೆದ ಕೆಲವು ದಿನಗಳಿಂದ ತಮಿಳುನಾಡಿನಲ್ಲಿ ನಡೆಯುತ್ತಿದ್ದ ರಾಜಕೀಯ ಹೈ ಡ್ರಾಮಾಕ್ಕೆ ತೆರೆಬೀಳುವ ಲಕ್ಷಣಗಳು ಗೋಚರಿಸುತ್ತಿದ್ದು, ಎಐಎಡಿಎಂಕೆ ಶಾಸಕಾಂಗ ಪಕ್ಷದ ಮುಖಂಡ ಎಡಪ್ಪಾಡಿ ಕೆ.ಪಳನಿಸ್ವಾಮಿಯವರಿಗೆ ಸರಕಾರ ರಚಿಸಲು ತಮಿಳುನಾಡು ಉಸ್ತುವಾರಿ ರಾಜ್ಯಪಾಲ ಸಿ.ವಿದ್ಯಾಸಾಗಾರ್ ಆಹ್ವಾನ ನೀಡಿದ್ದಾರೆ.
ಇಂದು ಪೂರ್ವಾಹ್ನ 11:30ರ ಸುಮಾರಿಗೆ ಆಹ್ವಾನದ ಮೇರೆಗೆ ರಾಜ್ಯಪಾಲರನ್ನು ಭೇಟಿಯಾದ ಪಳನಿಸ್ವಾಮಿಯವರು ತನಗೆ 124 ಶಾಸಕರ ಬೆಂಬಲ ಇರುವುದನ್ನು ಖಾತ್ರಿ ಪಡಿಸಿದ್ದರು. ಈ ಬಗ್ಗೆ 124 ಶಾಸಕರ ಸಹಿ ಇರುವ ಪತ್ರವನ್ನು ರಾಜ್ಯಪಾಲರ ಮುಂದಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ರಚನೆಗೆ ಪಳನಿಸ್ವಾಮಿಯವರಿಗೆ ರಾಜ್ಯಪಾಲರು ಆಹ್ವಾನ ನೀಡಿದ್ದಾರೆ. ಹಾಗೂ ಬಹುಮತ ಸಾಬೀತಿಗೆ 15 ದಿನಗಳ ಗಡುವು ಕೂಡಾ ನೀಡಿದ್ದಾರೆ.
ಅದರಂತೆ ಇಂದು ಸಂಜೆ 4:30ಕ್ಕೆ ನೂತನ ಸರಕಾರ ಅಸ್ತಿತ್ವಕ್ಕೆ ಬರಲಿದೆ. ನೂತನ ಮುಖ್ಯಮಂತ್ರಿಯಾಗಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಆಪ್ತರಾಗಿರುವ ಎಡಪ್ಪಾಡಿ ಕೆ.ಪಳನಿಸ್ವಾಮಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಈ ನಡುವೆ ಬಹುಮತ ಸಾಬೀತಿಗೆ ತನಗೂ ಅವಕಾಶ ನೀಡುವಂತೆ ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರೂ ಕೂಡಾ ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.





