ಯೋಧರಿಗೂ ಪತಂಜಲಿ ಉತ್ಪನ್ನ ಮಾರಲು ಅಂಗಡಿ ತೆರೆದರು ರಾಮದೇವ್

ಹೊಸದಿಲ್ಲಿ, ಫೆ.16: ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಉತ್ಪನ್ನಗಳನ್ನು ಇನ್ನು ಯೋಧರೂ ಬಳಸಲಿದ್ದಾರೆ. ಬಿಎಸ್‌ಎಫ್ ಈಗಾಗಲೇ ದೇಶದಾದ್ಯಂತವಿರುವ ತನ್ನ ಕ್ಯಾಂಪಸ್ಸುಗಳಲ್ಲಿ ಪತಂಜಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ತೆರೆಯಲು ಮುಂದಾಗಿದ್ದು, ಇಂತಹ ಪ್ರಥಮ ಅಂಗಡಿ ದಿಲ್ಲಿಯ ಬಿಎಸ್‌ಎಫ್ ಕ್ಯಾಂಪಿನಲ್ಲಿ ಬುಧವಾರ ಉದ್ಘಾಟನೆಗೊಂಡಿತು. ಈ ಸ್ಟೋರನ್ನು ಬಿಎಸ್‌ಎಫ್ ಮಹಾನಿರ್ದೇಶಕ ಕೆ.ಕೆ.ಶರ್ಮ ಅವರ ಪತ್ನಿ ರೇಣು ಶರ್ಮ ಉದ್ಘಾಟಿಸಿದರು.
ರೇಣು ಶರ್ಮ ಅವರ ನೇತೃತ್ವದ ಬಿಎಸ್‌ಎಫ್ ಯೋಧರ ಪತ್ನಿಯರ ಕಲ್ಯಾಣ ಸಂಸ್ಥೆ - ಬಿಎಸ್‌ಎಫ್ ವೈವ್ಸ್ ವೆಲ್ಫೇರ್ ಅಸೋಸಿಯೇಶನ್ ಪತಂಜಲಿ ಆಯುರ್ವೇದ ಲಿಮಿಟೆಡ್, ಹರಿದ್ವಾರ್ ಇದರೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಇದರಂತೆ ಪತಂಜಲಿ ಉತ್ಪನ್ನಗಳನ್ನು ಬಿಡಬ್ಲ್ಯಡಬ್ಲ್ಯುಎ ಪತಂಜಲಿ ಸ್ಟೋರ್ ಗಳ ಮುಖಾಂತರ ಬಿಎಸ್‌ಎಫ್ ಶಿಬಿರಗಳಲ್ಲಿ ಮಾರಾಟ ಮಾಡಲಾಗುವುದು.
ಬಿಎಸ್‌ಎಫ್ ಜವಾನರು ಹಾಗೂ ಅವರ ಕುಟುಂಬಗಳು ಈ ಉತ್ಪನ್ನಗಳನ್ನು ಖರೀದಿಸಿದ್ದೇ ಆದಲ್ಲಿ ಅವರಿಗೆ ಬೆಲೆ ರಿಯಾಯಿತಿಯೂ ಲಭ್ಯವಾಗಲಿದೆ. ಪತಂಜಲಿ ತನ್ನ ವಿವಿಧ ಉತ್ಪನ್ನಗಳನ್ನು ಶೇ.15ರಿಂದ ಶೇ.28ರವರೆಗೆ ರಿಯಾಯಿತಿ ದರಗಳಲ್ಲಿ ಬಿಎಸ್‌ಎಫ್ ಜವಾನರಿಗೆ ಒದಗಿಸಲಿದೆ ಎಂದು ಬಿಎಸ್‌ಎಫ್ ಹೇಳಿಕೆಯೊಂದು ತಿಳಿಸಿದೆ.
ಇಂತಹ ಪತಂಜಲಿ ಅಂಗಡಿಗಳು ಅಗರ್ತಲಾ, ತೆಕಾಂಪುರ್(ಗ್ವಾಲಿಯರ್), ಗುಹಾವಟಿ, ಜೋಧಪುರ, ಸಿಲಿಗುರಿ, ಜಲಂಧರ್, ಕೊಲ್ಕತ್ತಾ, ಜಮ್ಮು, ಬೆಂಗಳೂರು, ಸಿಲ್ಚರ್, ಅಹಮದಾಬಾದ್, ಹಝಾರಿಭಾಗ್ ಮುಂತಾದೆಡೆಗಳ ಬಿಎಸ್‌ಎಫ್ ಕ್ಯಾಂಪಸ್ ಗಳಲ್ಲಿ ತಲೆಯೆತ್ತಲಿವೆ.
ಕಳೆದ ವರ್ಷ ಬಿಎಸ್‌ಎಫ್ ತನ್ನ 2,000 ಜವಾನರನ್ನು ದೈಹಿಕ ಕ್ಷಮತೆ ಹೆಚ್ಚಿಸುವ ವ್ಯಾಯಾಮದಲ್ಲಿ ತರಬೇತುಗೊಳಿಸಲು ಉತ್ತರಾಖಂಡದ ಹರಿದ್ವಾರದಲ್ಲಿರುವ ರಾಮದೇವ್ ಅವರ ಪತಂಜಲಿ ಸಂಸ್ಥೆಗೆ ಕಳುಹಿಸಿತ್ತು.