ಬಲಗಾಲಿಗೆ ಮಾಡಬೇಕಾದ ಶಸ್ತ್ರಚಿಕಿತ್ಸೆಯನ್ನು ಎಡಗಾಲಿಗೆ ಮಾಡಿದ ಫೋರ್ಟಿಸ್ ವೈದ್ಯರು !

ದಿಲ್ಲಿ,ಫೆ.16: 24ರ ಹರೆಯದ ರವಿ ರಾಯ್ ಕಳೆದ ವರ್ಷದ ಜೂನ್ 19ರಂದು ಮಹಡಿಯ ಮೆಟ್ಟಿಲುಗಳಿಂದ ಜಾರಿ ಬಿದ್ದು ಬಲಪಾದದ ಗಂಟಿನ ಮೂಳೆಯನ್ನು ಮುರಿದುಕೊಂಡಿದ್ದ. ಸ್ಥಳೀಯ ವೈದ್ಯರ ಸಲಹೆಯ ಮೇರೆಗೆ ಶಸ್ತ್ರಚಿಕಿತ್ಸೆಗಾಗಿ ಆತನನ್ನು ನಗರದ ಶಾಲಿಮಾರ್ ಬಾಗ್ ನಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯ ‘ಬುದ್ಧಿವಂತ ’ ವೈದ್ಯರಿಬ್ಬರು ಆತನ ಬಲಗಾಲಿಗೆ ನಡೆಸಬೇಕಾಗಿದ್ದ ಶಸ್ತ್ರಚಿಕಿತ್ಸೆಯನ್ನು ಎಡಗಾಲಿಗೆ ಮಾಡುವ ಮೂಲಕ ‘ನೈಪುಣ್ಯ’ವನ್ನು ಪ್ರದರ್ಶಿಸಿದ್ದಾರೆ ! ದಿಲ್ಲಿ ವೈದ್ಯಕೀಯ ಮಂಡಳಿ(ಡಿಎಂಸಿ)ಯು ಈ ವೈದ್ಯ ಶಿಖಾಮಣಿಗಳ ಪರವಾನಿಗೆಯನ್ನು ಆರು ತಿಂಗಳ ಅವಧಿಗೆ ಅಮಾನತುಗೊಳಿಸಿದೆ.
ತಮ್ಮ ಪರವಾನಿಗೆಗಳು ಅಮಾನತುಗೊಂಡಿರುವುದರಿಂದ ಡಾ.ಅಶ್ವಿನ್ ಮಾಯಿಚಂದ್ ಮತ್ತು ಡಾ.ರಾಹುಲ್ ಕಕ್ರಾನ್ ಅವರು ಆರು ತಿಂಗಳ ಕಾಲ ದೇಶದ ಯಾವ ಭಾಗದಲ್ಲಿಯೂ ವೈದ್ಯವೃತ್ತಿಯನ್ನು ನಡೆಸುವಂತಿಲ್ಲ. ಡಿಎಂಸಿ ತನ್ನ ಮೆಡಿಕಲ್ ರಜಿಸ್ಟರ್‌ನಿಂದ ಇವರಿಬ್ಬರ ಹೆಸರುಗಳನ್ನು ತೆಗೆದು ಹಾಕಿಬಿಟ್ಟಿದೆ.
ಶಸ್ತ್ರಚಿಕಿತ್ಸೆಯ ಬಳಿಕ ಇನ್ನೂ ಅರವಳಿಕೆ ಪ್ರಭಾವದಲ್ಲಿಯೇ ಇದ್ದ ರವಿಯನ್ನು ರಿಕವರಿ ರೂಮ್‌ನಲ್ಲಿರಿಸಲಾಗಿತ್ತು. ಪ್ರಜ್ಞೆ ಮರುಕಳಿಸಿದ ತಕ್ಷಣ ತನ್ನ ಕಾಲು ನೋಡಿಕೊಂಡ ರವಿಗೆ ಆಘಾತ ಕಾದಿತ್ತು. ಮೂಳೆ ಮುರಿದಿದ್ದ ಬಲಗಾಲಿನ ಬದಲು ಎಡಗಾಲಿಗೆ ಪ್ಲಾಸ್ಟರ್ ಹಾಕಿದ್ದನ್ನು ಕಂಡು ಕಂಗಾಲಾದ ಆತ ತಕ್ಷಣ ತನ್ನ ಮೊಬೈಲ್‌ನಲ್ಲಿ ಚಿತ್ರ ತೆಗೆದು ಹೆತ್ತವರಿಗೆ ರವಾನಿಸಿದ್ದ.
ನಾವು ತಕ್ಷಣ ಸರ್ಜನ್‌ಗಳನ್ನು ಸಂಪರ್ಕಿಸಿದ್ದೆವು. ಸುಮ್ಮನೆ ಒಂದು ‘ಸಾರಿ ’ಹೇಳಿದ ಅವರು, ತಪ್ಪಿನಿಂದ ಹೀಗಾಗಿಬಿಟ್ಟಿದೆ. ಇದೊಂದು ಸರಳ ಶಸ್ತ್ರಚಿಕಿತ್ಸೆಯಾಗಿದ್ದು, ಎಡಗಾಲಿಗೆ ಹಾಕಿದ್ದ ಸ್ಕ್ರೂಗಳನ್ನು ತೆಗೆದು ಬಲಗಾಲಿಗೆ ಹಾಕಿಬಿಟ್ಟರಾಯಿತು ಎಂದು ಭರವಸೆ ನೀಡಿದ್ದರು ಎಂದು ರವಿಯ ತಂದೆ ರಾಮಕರಣ್ ರಾಯ್ ತಿಳಿಸಿದರು.
ಆಂತರಿಕ ವಿಚಾರಣೆಯ ಬಳಿಕ ಫೋರ್ಟಿಸ್ ಆಸ್ಪತ್ರೆ ತಪ್ಪಿತಸ್ಥ ವೈದ್ಯರನ್ನು ಸೇವೆಯಿಂದ ವಜಾ ಮಾಡಿದೆ.
ರೋಗಿಯ ಬಲಗಾಲು ತುಂಬ ಬಾತುಕೊಂಡಿತ್ತು, ಹೀಗಾಗಿ ಶಸ್ತ್ರಚಿಕಿತ್ಸೆ ಸಾಧ್ಯವಿರಲಿಲ್ಲ. ಎಡಗಾಲು ಕಡಿಮೆ ಬಾತುಕೊಂಡಿತ್ತು, ಹೀಗಾಗಿ ಆ ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ ಎಂದು ಡಾ.ಮಾಯಿಚಂದ್ ಮತ್ತು ಡಾ.ರಾಹುಲ್ ವಿಚಾರಣೆ ವೇಳೆ ಸಮಜಾಯಿಷಿ ನೀಡಿದ್ದರು !