ಶ್ರೀಶಾಂತ್ ರಿಂದ ಆಡುವ ಸವಾಲು: ಬಿಸಿಸಿಐ ಮುಂದಿನ ನಡೆ ಏನು ?

ಎರ್ನಾಕುಲಂ,ಫೆ. 16: ಬಿಸಿಸಿಐಯ ಅನುಮತಿ ಕಾದು ಜಿಗುಪ್ಸೆಗೊಂಡ ಶ್ರೀಶಾಂತ್ ಕ್ರಿಕೆಟ್‌ಗೆ ಮರಳಲು ಸಿದ್ಧರಾಗುತ್ತಿದ್ದಾರೆ. ಫೆಬ್ರವರಿ 19ಕ್ಕೆ ಎರ್ನಾಕುಲಂ ಕ್ರಿಕೆಟ್ ಕ್ಲಬ್‌ಗಾಗಿ ಫಸ್ಟ್ ಡಿವಿಷನ್ ಲೀಗ್ ಸ್ಪರ್ಧೆಯಲ್ಲಿ ಆಟಕ್ಕಿಳಿಯುವುದಾಗಿ ವೆಬ್‌ಪೋರ್ಟಲೊಂದಕ್ಕೆ ತಿಳಿಸಿದ್ದಾರೆ. ಆಟವಾಡುವ ದಿವಸಕ್ಕಾಗಿ ಸಹನೆಯಿಂದ ಕಾದು ಕುಳಿತಿದ್ದೆ. ನಾಲ್ಕುವರ್ಷಗಳ ಬಳಿಕ ಆಟದ ಅಂಗಣಕ್ಕೆ ಮರಳುವುದರಲ್ಲಿ ಸಂತೋಷವಿದೆ ಎಂದು ಶ್ರೀಶಾಂತ್ ಹೇಳಿದ್ದಾರೆ.
ಆಜೀವನಿಷೇಧಕ್ಕೆ ಸಂಬಂಧಿಸಿ ನನಗೆ ಅಧಿಕೃತವಾದ ಯಾವ ಸೂಚನೆಗಳು ಸಿಕ್ಕಿಲ್ಲ. ಮತ್ತೆ ತಾನೇಕೆ ಆಡದಿರಬೇಕು. ಎರ್ನಾಕುಲಂ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಮತ್ತು ಬಿಸಿಸಿಐ ಅಧಿಕೃತವಾಗಿ ಏನನ್ನೂ ತಿಳಿಸಿಲ್ಲ. ನಾನು ತಿಹಾರ್ ಜೈಲಿನಲ್ಲಿರುವಾಗ ದೊರೆತ ಅಮಾನತು ಪತ್ರಕ್ಕೆ ತೊಂಬತ್ತು ದಿವಸಗಳ ಕಾಲಾವಧಿ ಮಾತ್ರ ಇದೆ. ಇದುವರೆಗೂ ಬಿಸಿಸಿಐಯಲ್ಲಿ ನಿರೀಕ್ಷೆ ಇಟ್ಟು ಕ್ರಿಕೆಟ್ ಆಡದೆ ಇದ್ದುದು ತನ್ನ ಮೂರ್ಖತನವಾಗಿತ್ತು ಎಂದು ಶ್ರೀಶಾಂತ್ ಹೇಳಿದರು.
ತನ್ನ ವಾಪಸಾತಿಗೆ ಕ್ಲಬ್ ಎಲ್ಲ ರೀತಿಯ ಬೆಂಬಲವನ್ನು ನೀಡುತ್ತದೆ. ತಾನು ಆಡುವುದನ್ನು ಕಾಣಲು ಅವರು ಬಯಸಿದ್ದಾರೆ ಎಂದು ಶ್ರೀಶಾಂತ್ ಹೇಳಿದರು. ತನ್ನನ್ನು ಆಡಿಸುವುದಾದರೆ ಕ್ಲಬ್‌ಗೆ ನಿಷೇಧ ಹೇರುವ ಹಕ್ಕು ಬಿಸಿಸಿಐಗೆ ಇರುವುದಿಲ್ಲ. ತನಗೆ ನಿಷೇಧವನ್ನು ಅಧಿಕೃತವಾಗಿ ತಿಳಿಸದಿರುವವರೆಗೂ ನ್ಯಾಯ ತನ್ನ ಪಕ್ಷದಲ್ಲಿಯೇ ಇರುತ್ತದೆ ಎಂದು ಶ್ರೀಶಾಂತ್ ಬೆಟ್ಟು ಮಾಡಿದ್ದಾರೆ.
ಅಂತಾರಾಷ್ಟ್ರೀಯ ವಿವಾದ ಪರಿಹಾರ ಕೋರ್ಟಿನ ಮೊರೆ ಹೋಗಿದ್ದೇನೆ. ಇದರ ವಿಷಯ ಫೆಬ್ರವರಿ 19ಕ್ಕೆ ಗೊತ್ತಾಗುತ್ತದೆ. ಬಿಸಿಸಿಐ ಇಷ್ಟು ಕಾಲ ಮೌನವಾಗಿದ್ದದಕ್ಕಾಗಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಬೇಕಿತ್ತು. ನಾನಾದ್ದರಿಂದ ಹಾಗೆ ಮಾಡಿಲ್ಲ. ಸೋಲುವುದಾದರೂ ಹೋರಾಡಿದ ಮೇಲೆಯೇ ತೆರೆಮರೆಗೆ ಸರಿಯುವೆ ಎಂದು ಶ್ರೀಶಾಂತ್ ಹೇಳಿದ್ದಾರೆ.
ಶ್ರೀಶಾಂತ್‌ರನ್ನು ಆಡಿಸಿದರೆ ಎರ್ನಾಕುಲಂ ಕ್ರಿಕೆಟ್ ಕ್ಲಬ್‌ಗೆ ನಿಷೇಧ ಹೇರಲಾಗುವುದು ಎಂದು ಬಿಸಿಸಿಐ ಹಿರಿಯ ಸದಸ್ಯರ ಹೇಳಿಕೆ ವಿರುದ್ಧವೂ ಶ್ರೀಶಾಂತ್ ಮಾತಾಡಿದ್ದಾರೆ. ಹಾಗೆ ನಿಷೇಧ ಹೇರುವುದಾದರೆ ಅದನ್ನು ಕೋರ್ಟಿನಲ್ಲಿ ಪ್ರಶ್ನಿಸುತ್ತೇನೆ ಎಂದು ಶ್ರೀಶಾಂತ್ ತಿಳಿಸಿದ್ದಾರೆ.
ಫೆಬ್ರವರಿ 19ಕ್ಕೆ ಎಲ್ಲವೂ ತಾನು ನೆನೆದಂತೆ ನಡೆಯುವುದಾದರೆ ಸ್ಕಾಟಿಶ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಸಾಧ್ಯವಾಗಬಹುದು. ಫೆಬ್ರವರಿ 19ಕ್ಕೆ ನಾನು ಆಡಿದರೆ ಮುಂದಿನ ವಿಮಾನದಲ್ಲಿ ಗ್ಲೆನ್ ರೋತಾನ್ಸ್‌ಗಾಗಿ ಆಡಲು ತಾನು ಸ್ಕಾಟ್‌ಲೆಂಡ್‌ಗೆ ತೆರಳುವೆ. ಕ್ರಿಕೆಟ್ ಕೆರಿಯರ್ ನನಗೆ ಇನ್ನು ನಾಲ್ಕೈದು ವರ್ಷಗಳಷ್ಟೇ ಉಳಿದಿದೆ. ಅದನ್ನು ಸಂಪೂರ್ಣ ಉಪಯೋಗಿಸುತ್ತೇನೆ ಎಂದು ಶ್ರೀಶಾಂತ್ ಹೇಳಿದ್ದಾರೆಂದು ವರದಿ ತಿಳಿಸಿದೆ.