5.13 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2 ಬೈಕ್ ವಶ: ಐವರ ಬಂಧನ

ದಾವಣಗೆರೆ, ಫೆ.16: ನಗರದ ಬಡಾವಣೆ ಠಾಣೆ ಪೊಲೀಸರು ಬೈಕ್ ಮತ್ತು ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾದ ಐವರು ಆರೋಪಿಗಳನ್ನು ಬಂಧಿಸಿ, 5.13 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ 2 ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಭೀಮಾಶಂಕರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳನ್ಹನು ಹರಿಹರ ತಾ. ಮಲೆಬೆನ್ನೂರು ಗ್ರಾಮದ ನಾಗರಾಜ ಅಲಿಯಾಸ್ ಬಳ್ಳಾರಿ ನಾಗ, ಹಾವೇರಿ ಜಿಲ್ಲೆ ಬ್ಯಾಡಗಿ ತಾ. ಕದರ ಮಂಡಲಗಿಯ ಸಿದ್ದು ಉಜ್ಜಿನಿ, ಶಿವರಾಜ ನಾಯ್ಕರ್, ರಾಣೆಬೆನ್ನೂರಿನ ಚಂದ್ರಶೇಖರ ಅಂಬಲಿ ಹಾಗೂ ಹಾಲಪ್ಪ ಶಿವಪ್ಪ ಮಾಳಗಿ ಎಂದು ಗುರುತಿಸಲಾಗಿದೆ.
ನಂಬರ್ ಪ್ಲೇಟ್ ಇಲ್ಲದ ಯಮಹಾ ಆರ್-15 ಬೈಕ್‌ನಲ್ಲಿ ಅನುಮಾನಾಸ್ಪದವಾಗಿ ಚಾಲನೆ ಮಾಡುತ್ತಿದ್ದ ನಾಗರಾಜ ಅಲಿಯಾಸ್ ಬಳ್ಳಾರಿ ನಾಗ, ಸಿದ್ದು ಉಜ್ಜಿನಿಗೆ ಹಿಡಿದು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬಯಲಿಗೆ ಬಂದಿವೆ. ದಾವಣಗೆರೆಯ ಎಂಸಿಸಿ ಎ ಬ್ಲಾಕ್‌ನ ವೃದ್ಧಾಶ್ರಮದ ಬಳಿ ನಿಲ್ಲಿಸಿದ್ದ ಕೆ.ಎ.17, ಇಟಿ 0006 ಯಮಹಾ ಆರ್ 15 ಬೈಕನ್ನು ಎರಡೂವರೆ ತಿಂಗಳ ಹಿಂದೆ ಕಳ್ಳತನ ಮಾಡಿದ್ದಾಗಿ ಮಾಹಿತಿ ನೀಡಿದ್ದು, ಬಂಧಿತ ಆರೋಪಿಗಳಿಂದ ಒಟ್ಟು 5,13,580 ರೂ. ಮೌಲ್ಯದ 189 ಗ್ರಾಂ ಚಿನ್ನಾಭರಣ, 682 ಗ್ರಾಂ ಬೆಳ್ಳಿ ಆಭರಣ, 2 ಯಮಹಾ ಆರ್ 15 ಬೈಕ್ ಜಪ್ತು ಮಾಡಲಾಗಿದೆ. ಎರಡೂ ಬೈಕ್‌ಗಳ ಮೊತ್ತ ಸುಮಾರು 1.80 ಲಕ್ಷ ರೂ. ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ 1 ಬೈಕ್ ಕಳವು, ಹಾವೇರಿ ಜಿಲ್ಲೆ ಹಂಸಭಾವಿ ಠಾಣೆ ವ್ಯಾಪ್ತಿಯ 4 ಹಾಗೂ ಬ್ಯಾಡಗಿ ಠಾಣೆ ವ್ಯಾಪ್ತಿಯಲ್ಲಿ 2 ಮನೆಕಳವು ಸೇರಿದಂತೆ ಒಟ್ಟು 6 ಮನೆ ಕಳ್ಳತನ ಪ್ರಕರಣ ಪತ್ತೆ ಮಾಡಲಾಯಿತು ಎಂದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಯಶೋಧ ಎಸ್. ವಂಟಗೋಡಿ, ಡಿಎಸ್ಪಿ ಕೆ. ಅಶೋಕಕುಮಾರ, ವೃತ್ತ ನಿರೀಕ್ಷಕ ಜಿ.ಆರ್. ಸಂಗನಾಥ, ಎಸ್‌ಐಗಳಾದ ವೈ.ಎಸ್. ಶಿಲ್ಪ, ಡಿ.ಎಂ. ಭವ್ಯ, ಸಿಬ್ಬಂದಿ ವಿ. ರಾಜು, ಚಂದ್ರಪ್ಪ, ಗೋಪಾಲ ಶೇತ ಸನದಿ, ಪ್ರಭು, ಬಿ. ಗೋಪಿನಾಥ ನಾಯ್ಕ, ಜೆ. ಸಂತೋಷ, ಅರ್ಜುನ್ ರಾಯಲ್ ಮತ್ತಿತರರಿದ್ದರು.







