25 ವರ್ಷಗಳಿಂದ ಮಾತೇ ಆಡದ 'ಸೈಲೆಂಟ್ ಶೇಖ್' !

ಸೂಡಾನ್‌ನ ಶೇಖ್ ಬಶೀರ್ ಮೊಹ್ಮದ್ ಬಶೀರ್ ಇನ್ನು ಮಾತನಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದು 25 ವರ್ಷ ಕಳೆದಿದೆ. ಆ ಬಳಿಕ ಇವರು ಸೈಲೆಂಟ್ ಶೇಖ್ ಎಂದೇ ಖ್ಯಾತಿ ಗಳಿಸಿದ್ದಾರೆ. ಇವರು ಏನು ಹೇಳಬೇಕು ಎಂದುಕೊಂಡಿರುತ್ತಾರೋ ಅದನ್ನು ಬರೆದು ತೋರಿಸುತ್ತಾರೆ. ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವ ಹಾಗೂ ಟೆಲಿವಿಷನ್ ಸಂದರ್ಶನದಲ್ಲೂ ಪಾಲ್ಗೊಳ್ಳುವ ಅವರು, ಪೆನ್ನು ಹಾಗೂ ಕಾಗದದ ಮೂಲಕವೇ ಪ್ರಶ್ನೋತ್ತರಗಳ ವೇಳೆ ಸಂವಹನ ನಡೆಸುತ್ತಾರೆ.

ಪ್ರತಿಷ್ಠಿತ ಸರ್ಬಾನ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ಬಶೀರ್, 1956ರಲ್ಲಿ ಜನಿಸಿದವರು. ಅವರ ಬೌದ್ಧಿಕತೆ ಹಾಗೂ ಚಿಂತನೆಯನ್ನು ಬೆಂಬಲಿಸುವ ಅತಿದೊಡ್ಡ ಅಭಿಮಾನಿ ವರ್ಗವನ್ನು ಅವರು ಹೊಂದಿದ್ದಾರೆ. 1990ರಲ್ಲಿ ಅರ್ಥಶಾಸ್ತ್ರ ಹಾಗೂ ವಿಜ್ಞಾನದ ಸ್ನಾತಕೋತ್ತರ ಪದವಿಯೊಂದಿಇಗೆ ಫ್ರಾನ್ಸ್‌ನಿಂದ ಮರಳಿದ ಬಳಿಕ ಖುರಾನ್ ಅಧ್ಯಯನದ ಬಗ್ಗೆ ಸಂಶೋಧನೆ ಕೈಗೊಂಡರು. ದೇವರ ಇಚ್ಛೆಗೆ ಅನುಗುಣವಾಗಿ ಮಾತು ನಿಲ್ಲಿಸಿ ಮೌನಿಯಾದರು.
"ಮಾತಿನ ಕೊನೆಗೆ ಮೌನವಿದೆ" ಎನ್ನುವುದು ಅವರು ಪ್ರತಿಪಾದಿಸಿದ ಲಿಖಿತ ಸಿದ್ಧಾಂತ. ಆದರೆ ಅನುಭವಗಳು ಖಾಸಗಿ ರಹಸ್ಯವಾಗಿಯೇ ಉಳಿಯುತ್ತವೆ ಎಂದು ಅವರು ಲಿಖಿತವಾಗಿ ಪ್ರತಿಪಾದಿಸುತ್ತಾರೆ. ಮಾತು ನಿಲ್ಲಿಸಿರುವ ಬಗ್ಗೆ ಯಾವುದೇ ವಿಷಾದ ಇಲ್ಲ ಎಂದು ಟಿವಿ ಸಂದರ್ಶನದಲ್ಲಿ ಬರೆದು ಸ್ಪಷ್ಟಪಡಿಸಿದ್ದಾರೆ.
ನನ್ನ ಹೃದಯ ಏನು ಹೇಳಬೇಕು ಅಂದುಕೊಳ್ಳುತ್ತದೆಯೋ ಅದನ್ನು ಪೆನ್ನು ಹೇಳುತ್ತದೆ. ಮೌನದಲ್ಲಿ ಮನಃಶಾಂತಿ ಇದೆ ಎಂದು ಅವರು ಹೇಳುತ್ತಾರೆ.







