2005ರ ದಿಲ್ಲಿ ಸರಣಿ ಸ್ಫೋಟ ಪ್ರಕರಣ: ದಾರ್‌ಗೆ 10 ವರ್ಷ ಜೈಲು,ಇಬ್ಬರ ಖುಲಾಸೆ

ಹೊಸದಿಲ್ಲಿ,ಫೆ.16: 2005,ಅ.29ರಂದು ದಿಲ್ಲಿಯಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟಗಳ ಪ್ರಕರಣದ ತೀರ್ಪು ಗುರುವಾರ ಹೊರಬಿದ್ದಿದೆ. ಪ್ರಮುಖ ಆರೋಪಿ ತಾರಿಖ್ ಅಹ್ಮದ್ ದಾರ್‌ಗೆ 10 ವರ್ಷ ಜೈಲುಶಿಕ್ಷೆ ಘೋಷಿಸಿರುವ ಸ್ಥಳೀಯ ನಾಯಾಲಯವು ಇತರ ಇಬ್ಬರು ಆರೋಪಿಗಳಾದ ಮೊಹಮ್ಮದ್ ರಫೀಕ್ ಶಾ ಮತ್ತು ಮೊಹಮ್ಮದ್ ಹುಸೇನ್ ಫೈಝಲ್ ಅವರನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿದೆ. ಈ ಸ್ಫೋಟಗಳಲ್ಲಿ 60ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
2005ರಲ್ಲಿ ದಾರ್‌ನನ್ನು ಢಾಕಾದಲ್ಲಿ ಬಂಧಿಸಿದ್ದ ಪೊಲೀಸರು 2005ರ ದಿಲ್ಲಿ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 2007ರಲ್ಲಿ ಭಾರತಕ್ಕೆ ಗಡಿಪಾರು ಮಾಡಿದ್ದರು. ಸಾಕ್ಷಾಧಾರಗಳ ಕೊರತೆಯಿಂದಾಗಿ ಆತನ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸುವಲ್ಲಿ ದಿಲ್ಲಿ ಪೊಲೀಸರ ವೈಫಲ್ಯದಿಂದಾಗಿ ಮೂರು ತಿಂಗಳ ಬಳಕ ತೀಸ್ ಹಝಾರಿ ನ್ಯಾಯಾಲಯವು ಆತನನ್ನು ಬಿಡುಗಡೆಗೊಳಿಸಿತ್ತು.
ನಂತರ ಪೊಲೀಸರು ದಾರ್ ಲಷ್ಕರ್-ಎ-ತೊಯ್ಬ ಜೊತೆ ಸಂಪರ್ಕ ಹೊಂದಿದ್ದ ಎನ್ನುವುದನ್ನು ರುಜುವಾತುಗೊಳಿಸುವ ಆತನ ದೂರವಾಣಿ ಕರೆಗಳ ವಿವರಗಳ ಆಧಾರದಲ್ಲಿ ಆತನ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. 50 ಜೀವಗಳು ಬಲಿಯಾಗಿ, 200ಕ್ಕೂ ಅಧಿಕ ಜನರು ಗಾಯಗೊಂಡಿದ್ದ ಸರೋಜಿನಿ ನಗರ ಮಾರ್ಕೆಟ್ ಸ್ಫೋಟ ಪ್ರಕರಣದ ಜೊತೆಗೆ ಅದೇ ದಿನ ಸಂಭವಿಸಿದ್ದ ಪಹಾಡಗಂಜ್ ಮತ್ತು ಕಾಲ್ಕಾಜಿ ಸ್ಫೋಟ ಪ್ರಕರಣಗಳಲ್ಲಿಯೂ ದಾರ್ ಪ್ರಮುಖ ಆರೋಪಿಯಾಗಿದ್ದ.
2005,ಅ.29ರಂದು ದೀಪಾವಳಿಯ ಮೂರು ದಿನಗಳ ಮೊದಲು ಸಂಜೆ 5:25ಕ್ಕೆ ದಿಲ್ಲಿಯ ಪಹಾಡಗಂಜ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 18 ಜನರು ಬಲಿಯಾಗಿದ್ದರು. 35 ನಿಮಿಷಗಳ ಬಳಿಕ ಗೋವಿಂದಪುರಿ ಪ್ರದೇಶದಲ್ಲಿ ಬಸ್ಸೊಂದರ ಬಳಿ ಎರಡನೇ ಸ್ಫೋಟ ಸಂಭವಿಸಿತ್ತು. ಐದು ನಿಮಿಷಗಳ ಬಳಿಕ ಸರೋಜಿನಿ ನಗರ ಮಾರುಕಟ್ಟೆಯಲ್ಲಿ ಮೂರನೇ ಸ್ಫೋಟ ನಡೆದಿತ್ತು. ಪಾಕಿಸ್ತಾನದ ಇಸ್ಲಾಮಿಕ್ ರೆವಲ್ಯೂಷನರಿ ಫ್ರಂಟ್ ಅಥವಾ ಇಸ್ಲಾಮಿಕ್ ಇಂಕಿಲಾಬ್ ಮಹಝ್ ಈ ಭಯೋತ್ಪಾದಕ ದಾಳಿಗಳ ಹೊಣೆಯನ್ನು ಹೊತ್ತುಕೊಂಡಿತ್ತು.