ಎಲ್ಲ ಸಿಬಿಎಸ್‌ಇ ಶಾಲೆಗಳಲ್ಲಿ ಎನ್‌ಸಿಇಆರ್‌ಟಿ ಪುಸ್ತಕಗಳು ಕಡ್ಡಾಯ

ಹೊಸದಿಲ್ಲಿ,ಫೆ.16: 2017-18ನೇ ಶೈಕ್ಷಣಿಕ ವರ್ಷದಿಂದ ದೇಶಾದ್ಯಂತ ಎಲ್ಲ ಸಿಬಿಎಸ್‌ಇ ಶಾಲೆಗಳಿಗೆ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಕಡ್ಡಾಯಗೊಳಿಸಲಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪುನರ್ ಪರಿಶೀಲನಾ ಸಭೆಯು ಕೈಗೊಂಡಿರುವ ಈ ನಿರ್ಧಾರವು ದೇಶದ ಎಲ್ಲ ಶಾಲೆಗಳಲ್ಲಿಯ ಪಠ್ಯಕ್ರಮದಲ್ಲಿ ಸಮಾನತೆಯನ್ನು ತರುವ ನಿರೀಕ್ಷೆಯಿದೆ.
ಎನ್‌ಸಿಇಆರ್‌ಟಿ ಪುಸ್ತಕಗಳಿಗಿಂತ ಶೇ.300-600 ರಷ್ಟು ಅಧಿಕ ದರ ತೆತ್ತು ಖಾಸಗಿ ಪ್ರಕಾಶಕರಿಂದ ಪುಸ್ತಕಗಳ ಖರೀದಿಗೆ ಶಾಲೆಗಳು ಒತ್ತಡ ಹೇರುತ್ತಿದ್ದರಿಂದ ಸರಕಾರದ ಈ ನಿರ್ಧಾರ ಲಕ್ಷಾಂತರ ಪಾಲಕರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಮಾರ್ಚ್ ಕೊನೆಯ ವಾರದ ವೇಳೆಗೆ ದೇಶಾದ್ಯಂತದ ತನ್ನ 680 ಅಧಿಕೃತ ವಿತರಕರ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಎಲ್ಲ ಪಠ್ಯಪುಸ್ತಕಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕೆಂದು ಎನ್‌ಸಿಇಆರ್‌ಟಿಗೆ ನಿರ್ದೇಶ ನೀಡಲಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದರು. ಎಲ್ಲ ಸಿಬಿಎಸ್‌ಇ ಶಾಲೆಗಳು ಇದೇ ಫೆ.22ರೊಳಗೆ ತಮ್ಮ ಪಠ್ಯಪುಸ್ತಕಗಳ ಬೇಡಿಕೆಯನ್ನು ಆನ್‌ಲೈನ್ ಮೂಲಕ ಸಿಬಿಎಸ್‌ಇ ಜಾಲತಾಣಕ್ಕೆ ಸಲ್ಲಿಸಬೇಕಾಗಿದೆ.







