‘ನಾಯಿ ಹೇಳಿಕೆ ’ವಿರುದ್ಧ ಅರ್ಜಿ:ಸಚಿವ ಸಿಂಗ್‌ಗೆ ನ್ಯಾಯಾಲಯದ ನೋಟಿಸ್

ಹೊಸದಿಲ್ಲಿ,ಫೆ.16: ಹರ್ಯಾಣದಲ್ಲಿ ಇಬ್ಬರು ದಲಿತ ಮಕ್ಕಳ ಸಜೀವ ದಹನದ ಬಳಿಕ ‘ನಾಯಿ ಹೇಳಿಕೆ ’ ನೀಡಿದ್ದಕ್ಕಾಗಿ ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಕೆ.ಸಿಂಗ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿರುವ ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಸಚಿವರಿಗೆ ನೋಟಿಸ್ ಹೊರಡಿಸಿದೆ.
2015,ಅಕ್ಟೋಬರ್‌ನಲ್ಲಿ ಹರ್ಯಾಣದ ಫರೀದಾಬಾದ್‌ನಲ್ಲಿ ದಲಿತ ಬಾಲಕರಿಬ್ಬರ ಸಜೀವ ದಹನ ಘಟನೆಗೆ ಸಂಬಂಧಿಸಿದಂತೆ ಸಿಂಗ್ ಅವರು, ಯಾರಾದರೂ ನಾಯಿಗೆ ಕಲ್ಲು ಹೊಡೆದರೆ ಸರಕಾರವನ್ನು ದೂರುವಂತಿಲ್ಲ ಎಂದು ಹೇಳುವ ಮೂಲಕ ವಿವಾದವನ್ನು ಸೃಷ್ಟಿಸಿದ್ದರು.
ತನ್ನ ಕ್ರಿಮಿನಲ್ ದೂರನ್ನು ವಜಾಗೊಳಿಸಿದ್ದ ಕೆಳ ನ್ಯಾಯಾಲಯದ ನಿರ್ಧಾರವನ್ನು ಪ್ರಶ್ನಿಸಿರುವ ಪುನರ್‌ಪರೀಶೀಲನಾ ಅರ್ಜಿ ಪ್ರತಿಯೊಂದನ್ನು ಸಚಿವ ಸಿಂಗ್ ಅವರಿಗೆ ಒದಗಿಸುವಂತೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್.ಕೆ.ಮಲ್ಹೋತ್ರಾ ಅವರು ಅರ್ಜಿದಾರರಾದ ನ್ಯಾಯವಾದಿ ಸತ್ಯಪ್ರಕಾಶ ಗೌತಮ್ ಅವರಿಗೆ ಸೂಚಿಸಿದರು. ಪುನರ್ ಪರಿಶೀಲನಾ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಈ ಮೊದಲು ಸಿಂಗ್ ಅವರಿಗೆ ನೋಟಿಸ್‌ನ್ನು ಹೊರಡಿಸಿತ್ತು.
2015,ಅ.21ರಂದು ಸಿಂಗ್ ಅವರು ನೀಡಿದ್ದ ಹೇಳಿಕೆಯಿಂದ ಯಾವುದೇ ಸಂಜ್ಞೇಯ ಅಪರಾಧವನ್ನು ರೂಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ಪೊಲೀಸರು ಅರ್ಜಿಯನ್ನು ವಿರೋಧಿಸಿದ್ದರು.
ಸಿಂಗ್ ಅವರು ಇಂತಹ ಹೇಳಿಕೆಯನ್ನು ನೀಡುವ ಮೂಲಕ ದಲಿತ ಸಮುದಾಯದ ಭಾವನೆಗಳಿಗೆ ನೋವನ್ನುಂಟು ಮಾಡಿದ್ದಾರೆ ಎಂದು ಅರೋಪಿಸಿ ಗೌತಮ ಅವರು ಸಲ್ಲಿಸಿದ್ದ ದೂರು ಅರ್ಜಿಯನ್ನು ವಿಚಾರಣಾ ನ್ಯಾಯಾಲಯವು 2015,ಡಿ.7ರಂದು ವಜಾಗೊಳಿಸಿತ್ತು. ಸಚಿವರ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಕ್ರಿಮಿನಲ್ ಅಪರಾಧ ಕಂಡುಬರುತ್ತಿಲ್ಲ ಎಂದು ಅದು ಹೇಳಿತ್ತು.
ಈ ಆದೇಶವನ್ನು ಪ್ರಶ್ನಿಸಿ ಗೌತಮ ಅವರು 2015,ಡಿಸೆಂಬರ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದರು. ಆರೋಪಿಯನ್ನು ರಕ್ಷಿಸಲು ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಅವರ ವಕೀಲರ ಪಾತ್ರವನ್ನು ನಿರ್ವಹಿಸಲು ಪ್ರಯತ್ನಿಸಿದ್ದು ಸ್ಪಷ್ಟವಾಗಿದೆ. ಈ ಕಾರಣದಿಂದಾಗಿ ಅವರ ಆದೇಶವು ತಳ್ಳಿ ಹಾಕಲು ಅರ್ಹವಾಗಿದೆ ಎಂದು ಸೆಷನ್ಸ್ ನ್ಯಾಯಾಲಯವು ಹೇಳಿತು.







