ತ್ರಿವಳಿ ತಲಾಖ್ ಕುರಿತ ಅರ್ಜಿಗಳ ಇತ್ಯರ್ಥಕ್ಕೆ ಸಂವಿಧಾನ ಪೀಠ ರಚನೆ: ಸುಪ್ರೀಂ

ಹೊಸದಿಲ್ಲಿ,ಫೆ.16: ಮುಸ್ಲಿಮರಲ್ಲಿ ತ್ರಿವಳಿ ತಲಾಖ್, ನಿಖಾ ಹಲಾಲ ಮತ್ತು ಬಹುಪತ್ನಿತ್ವ ಪದ್ಧತಿಗೆ ಸಂಬಂಧಿಸಿದ ಅರ್ಜಿಗಳ ಗೊಂಚಲಿನ ವಿಚಾರಣೆ ಮತ್ತು ಇತ್ಯರ್ಥಕ್ಕಾಗಿ ಐವರು ನ್ಯಾಯಾಧೀಶರ ಸಂವಿಧಾನ ಪೀಠವನ್ನು ಸರ್ವೋಚ್ಚ ನ್ಯಾಯಾಲಯವು ರಚಿಸಲಿದೆ.
ಪ್ರಕರಣಗಳಿಗೆ ಸಂಬಂಧಿಸಿದಂತೆ ಕಕ್ಷಿಗಳಿಂದ ವಿಷಯ ನಿರೂಪಣೆಗಳನ್ನು ದಾಖಲಿಸಿಕೊಂಡ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಪೀಠವು ,ಸಂವಿಧಾನ ಪೀಠ ರಚನೆ ಪರಿಗಣನೆಗೆ ಕುರಿತು ಪ್ರಶ್ನೆಗಳನ್ನು ಮಾ.30ರಂದು ನಿರ್ಧರಿಸುವುದಾಗಿ ತಿಳಿಸಿತು. ಕಕ್ಷಿದಾರರು ಎತ್ತಿರುವ ವಿಷಯಗಳು ಅತ್ಯಂತ ಮಹತ್ವದ್ದಾಗಿವೆ. ಇವುಗಳ ಬಗ್ಗೆ ಅವಸರಿಸುವಂತಿಲ್ಲ ಎಂದೂ ಪೀಠವು ಹೇಳಿತು.
ಕೇಂದ್ರವು ರೂಪಿಸಿರುವ ಕಾನೂನು ವಿಷಯಗಳನ್ನು ಪ್ರಸ್ತಾಪಿಸಿದ ಅದು, ಇವೆಲ್ಲವೂ ಸಾಂವಿಧಾನಿಕ ವಿಷಯಗಳಿಗೆ ಸಂಬಂಧಿಸಿವೆ ಮತ್ತು ವಿಶಾಲ ಪೀಠದಿಂದ ವಿಚಾರಣೆ ಅಗತ್ಯವಾಗಿದೆ ಎಂದು ಹೇಳಿತು. ಮುಂದಿನ ವಿಚಾರಣಾ ದಿನಾಂಕದೊಳಗೆ 15 ಪುಟಗಳಿಗೆ ಮೀರದಂತೆ ತಮ್ಮ ಲಿಖಿತ ಹೇಳಿಕೆಗಳನ್ನು ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಎನ್.ವಿ.ರಮಣ್ ಮತ್ತು ಡಿ.ವಿ.ಚಂದ್ರಚೂಡ ಅವರನ್ನೂ ಒಳಗೊಂಡ ಪೀಠವು ಸಂಬಂಧಿಸಿದ ಕಕ್ಷಿಗಳಿಗೆ ಸೂಚಿಸಿತು.
ಶಾ ಬಾನು ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ್ದ ತೀರ್ಪಿನ ಪಾಡೇನು ಎಂಬ ಮಹಿಳಾ ನ್ಯಾಯವಾದಿಯೋರ್ವರ ಪ್ರಶ್ನೆಗೆ ಉತ್ತರಿಸಿದ ಪೀಠವು, ಯಾವಾಗಲೂ ಪ್ರಕರಣವೊಂದಕ್ಕೆ ಎರಡು ಮುಖಗಳಿರುತ್ತವೆ. ಕಳೆದ 40 ವರ್ಷಗಳಿಂದಲೂ ನಾವು ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತಿದ್ದೇವೆ. ನಾವು ಕಾನೂನಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು ಮತ್ತು ನಾವು ಕಾನೂನನ್ನು ಮೀರುವಂತಿಲ್ಲ ಎಂದು ತಿಳಿಸಿತು.
ಇದೊಂದು ಬಹಳ ಮುಖ್ಯ ವಿಷಯವಾಗಿರುವುದರಿಂದ ಶನಿವಾರ ಮತ್ತು ರವಿವಾರಗಳಲ್ಲಿಯೂ ವಿಚಾರಣೆ ನಡೆಸಲು ತಾನು ಸಿದ್ಧನಿದ್ದೇನೆ ಎಂದು ಪೀಠವು ಸ್ಪಷ್ಟಪಡಿಸಿತು.