ಕಿಮ್ ಜಾಂಗ್ ಉನ್ ಸಹೋದರನ ಶವ ಕಳುಹಿಸಿಕೊಡಲು ಉತ್ತರ ಕೊರಿಯ ಮನವಿ

ಕೌಲಾಲಂಪುರ (ಮಲೇಶ್ಯ), ಫೆ. 16: ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಅವರ ಸಹೋದರ ಕಿಮ್ ಜಾಂಗ್ ನಾಮ್ ಅವರ ಮೃತದೇಹವನ್ನು ಉತ್ತರ ಕೊರಿಯದ ಕೋರಿಕೆಯ ಮೇರೆಗೆ ಮಲೇಶ್ಯವು ಕಳುಹಿಸಿಕೊಡಲಿದೆ.
ಕಿಮ್ ಜಾಂಗ್ ಉನ್ ಅವರ ತಂದೆ ದಿವಂಗತ ಕಿಮ್ ಜಾಂಗ್ ಇಲ್ ಅವರ ಇನ್ನೊಂದು ಪತ್ನಿಯ ಮಗನಾಗಿರುವ ಕಿಮ್ ಜಾಂಗ್ ನಾಮ್ ಅವರನ್ನು ಮಲೇಶ್ಯದ ರಾಜಧಾನಿ ಕೌಲಾಲಂಪುರದ ವಿಮಾನ ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ವಿಷಪ್ರಾಶನ ಮಾಡಿ ಕೊಂದಿದ್ದರು.
ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಮಲೇಶ್ಯದ ಉಪ ಪ್ರಧಾನಿ ಅಹ್ಮದ್ ಝಾಹಿದ್, ಇಂಥ ಬೇಡಿಕೆಯನ್ನು ಪ್ಯಾಂಗ್‌ಯಾಂಗ್ ಮುಂದಿಟ್ಟಿದೆ ಎಂದರು.
‘‘ಯಾವುದೇ ವಿದೇಶಿ ಸರಕಾರಗಳಿಂದ ಬರುವ ಬೇಡಿಕೆಯನ್ನು ನಾವು ಈಡೇರಿಸುತ್ತೇವೆ. ಆದಾಗ್ಯೂ, ಇಲ್ಲಿ ಹಲವು ವಿಧಿವಿಧಾನಗಳನ್ನು ಅನುಸರಿಸಬೇಕಾಗಿದೆ. ಯಾವುದೇ ದೇಶದೊಂದಿಗಿನ ದ್ವಿಪಕ್ಷೀಯ ಸಂಬಂಧಗಳನ್ನು ಗೌರವಿಸುವುದು ನಮ್ಮ ನೀತಿಯಾಗಿದೆ’’ ಎಂದರು.
45 ವರ್ಷದ ಕಿಮ್ ಜಾಂಗ್ ನಾಮ್ ಕಿಮ್ ಚಾಲ್ ಎಂಬ ಹೆಸರಿನ ಪಾಸ್‌ಪೋರ್ಟ್ ಆಧಾರದಲ್ಲಿ ಮಲೇಶ್ಯದಲ್ಲಿದ್ದರು ಎಂದು ನಂಬಲಾಗಿದೆ ಎಂದು ದಕ್ಷಿಣ ಕೊರಿಯ ಮಾಧ್ಯಮಗಳು ವರದಿ ಮಾಡಿವೆ.
ಕಿಮ್ ಜಾಂಗ್ ನಾಮ್ ಮಕಾವುಗೆ ಹೋಗುವುದಕ್ಕಾಗಿ ವಿಮಾನ ಏರಲು ಕೌಲಾಲಂಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾಗ ಉತ್ತರ ಕೊರಿಯದಿಂದ ನಿಯೋಜಿಸಲ್ಪಟ್ಟ ಏಜಂಟರಿಂದ ವಿಷಪ್ರಾಶನಕ್ಕೊಳಗಾದರು ಎಂದು ದಕ್ಷಿಣ ಕೊರಿಯದ ಗುಪ್ತಚರ ಮುಖ್ಯಸ್ಥರು ಹೇಳಿದ್ದಾರೆ.







