60 ಲಕ್ಷ ಫೆಲೆಸ್ತೀನೀಯರು ವರ್ಣಭೇದ ಆಳ್ವಿಕೆಯಲ್ಲಿ ಬದುಕುತ್ತಿದ್ದಾರೆ: ಪಿಎಲ್‌ಒ

ಜಿದ್ದಾ, ಫೆ. 16: ಫೆಲೆಸ್ತೀನ್-ಇಸ್ರೇಲ್ ಸಂಘರ್ಷದ ಪರಿಹಾರಕ್ಕೆ ಸಂಬಂಧಿಸಿ ಅಮೆರಿಕದ ನಿಲುವಿನಲ್ಲಿ ಆಗಿರುವ ಮಾರ್ಪಾಡಿಗೆ ಫೆಲೆಸ್ತೀನೀಯರು ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಭೆಯ ಬಳಿಕ ಅಮೆರಿಕದ ನಿಲುವಿನದಲ್ಲಿ ಬದಲಾವಣೆ ಆಗಿರುವುದನ್ನು ಸ್ಮರಿಸಬಹುದಾಗಿದೆ
ಅಮೆರಿಕದ ನಿಲುವಿನಲ್ಲಿ ಆಗಿರುವ ಬದಲಾವಣೆಗೆ ಪ್ರತಿಕ್ರಿಯಿಸಿರುವ ಫೆಲೆಸ್ತೀನ್ ಪ್ರಾಧಿಕಾರ, ಅಂತಾರಾಷ್ಟ್ರೀಯ ಒಪ್ಪಂದ, ಅಂತಾರಾಷ್ಟ್ರೀಯ ಕಾನೂನು ಮತ್ತು ಅರಬ್ ಶಾಂತಿ ಪ್ರಕ್ರಿಯೆಗಳಿಗೆ ಅನುಗುಣವಾಗಿ ಎರಡು-ದೇಶ ಪರಿಹಾರಕ್ಕೆ ತಾನು ಬದ್ಧವಾಗಿರುವುದಾಗಿ ಪುನರುಚ್ಚರಿಸಿದೆ. ಈ ಆಧಾರದಲ್ಲಿ ಟ್ರಂಪ್ ಆಡಳಿತದೊಂದಿಗೆ ಧನಾತ್ಮಕವಾಗಿ ವ್ಯವಹರಿಸಲು ಫೆಲೆಸ್ತೀನ್ ಪ್ರಾಧಿಕಾರ ಸಿದ್ಧವಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಮಹ್ಮೂದ್ ಅಬ್ಬಾಸ್‌ರ ಸಲಹಾಕಾರ ಹುಸಮ್ ರೆಮ್ಲಟ್ ‘ಅರಬ್ ನ್ಯೂಸ್’ಗೆ ತಿಳಿಸಿದರು.
‘‘ಫೆಲೆಸ್ತೀನ್ ದೇಶದ ಪಶ್ಚಿಮದ ಗಡಿಯ ಮೇಲಿನ ಇಸ್ರೇಲಿ ನಿಯಂತ್ರಣವನ್ನು ಮುಂದುವರಿಸುವುದು ಹಾಗೂ ಇಸ್ರೇಲನ್ನು ಯಹೂದಿ ರಾಷ್ಟ್ರ ಎಂಬುದಾಗಿ ಮಾನ್ಯ ಮಾಡುವಂತೆ ಒತ್ತಾಯಿಸುವುದು ಇಸ್ರೇಲ್‌ನ ಯೋಜನೆಯಾಗಿದೆ. ಇದು ಫೆಲೆಸ್ತೀನೀಯರ ಮೇಲೆ ತಮ್ಮ ನಿರ್ಧಾರವನ್ನು ಹೇರುವ ನೆತನ್ಯಾಹು ಅವರ ಪ್ರಯತ್ನಗಳ ಮುಂದುವರಿಕೆಯಾಗಿದೆ ಎಂಬುದಾಗಿ ಪರಿಗಣಿಸಲಾಗಿದೆ’’ ಎಂದು ಫೆಲೆಸ್ತೀನಿಯನ್ ಪ್ರಾಧಿಕಾರ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ. ‘‘ಇಂದು ಸುಮಾರು 60 ಲಕ್ಷ ಫೆಲೆಸ್ತೀನೀಯರು ಐತಿಹಾಸಿಕ ಫೆಲೆಸ್ತೀನ್‌ನಲ್ಲಿ ಇಸ್ರೇಲ್‌ನ ನಿಯಂತ್ರಣದಲ್ಲಿ ವಾಸಿಸುತ್ತಿದ್ದಾರೆ.
ಸುಮಾರು 60 ಲಕ್ಷ ಮಂದಿ ದೇಶಭ್ರಷ್ಟ ಜೀವನ ನಡೆಸುತ್ತಿದ್ದಾರೆ. ವರ್ಣ ಭೇದ ನೀತಿಯ ಜೀವನ ನಮ್ಮದು’’ ಎಂದು ಫೆಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್‌ನ ಮಹಾಕಾರ್ಯದರ್ಶಿ ಸಯೀಬ್ ಎರೆಕಟ್ ‘ಅರಬ್ ನ್ಯೂಸ್’ಗೆ ಹೇಳಿದರು.







