ಅತ್ಯಾಚಾರ ಆರೋಪ ಸಾಬೀತು, ಅಪರಾಧಿಗೆ 7 ವರ್ಷ ಶಿಕ್ಷೆ

ಮಂಗಳೂರು, ಫೆ. 16: ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರಗೈದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ 6ನೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿಗೆ ಏಳು ವರ್ಷ ಜೈಲು ಶಿಕ್ಷೆ ಹಾಗೂ 2 ಸಾವಿರ ರೂ.ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.
ಬೆಳ್ತಂಗಡಿ ತಾಲೂಕಿನ ಮಲವಂತಿಕೆ ಗ್ರಾಮದ ಕರೆಕೋಡಿ ನಿವಾಸಿ ಪ್ರವೀಣ (31) ಶಿಕ್ಷೆಗೊಳಗಾದ ಅಪರಾಧಿ. ಈತ ಬೆಳ್ತಗಂಡಿ ಕಡಿರುದ್ಯಾವರ ಗ್ರಾಮದ 22 ವರ್ಷ ವಯಸ್ಸಿನ ಯುವತಿ ಮೇಲೆ ಅತ್ಯಾಚಾರವಿಸಗಿದ್ದ. ತೀರ್ಪು ಪ್ರಕಟಿಸಿದ ನ್ಯಾಯಾಲಯವು ಅಪರಾಧಿ ದಂಡ ತೆರಲು ತಪ್ಪಿದಲ್ಲಿ ಮತ್ತೆ 1 ತಿಂಗಳು ಸಜೆ ಅನುಭವಿಸುವಂತೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ತ್ರಸ್ತ ಯುವತಿ 8 ನೆ ತರಗತಿ ತನಕ ವಿದ್ಯಾಭ್ಯಾಸ ಮಾಡಿ ಬಳಿಕ ಬೀಡಿ ಕಟ್ಟುವ ವೃತ್ತಿ ಆರಂಭಿಸಿದ್ದಳು. ಈಕೆ ಕಿಲ್ಲೂರು ಪೇಟೆಗೆ ಬಂದಿದ್ದ ಸಂದರ್ಭದಲ್ಲಿ ಸಹಪಾಠಿಯಾಗಿದ್ದ ನಾಗೇಶ ಎಂಬಾತ ಎಂಬಾತನ ಪರಿಚಯವಾಗಿತ್ತು. ಆತ ಆಕೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಆ ನಂಬರನ್ನು ಗೆಳೆಯ ಪ್ರವೀಣ್‌ಗೆ ನೀಡಿದ್ದ. ಪ್ರವೀಣ ತಾನು ನಾಗೇಶನ ಗೆಳೆಯ ಎಂದು ಪರಿಚಯ ಮಾಡಿಕೊಂಡು ಮಾತನಾಡಲಾರಂಭಿಸಿದ್ದ.
2014 ಜುಲೈ 8ರಂದು ಪ್ರವೀಣ ಮದುವೆಯ ಬಗ್ಗೆ ಮಾತನಾಡಲಿಕ್ಕಿದೆ ಎಂದು ಲಾಯಿಲಕ್ಕೆ ಕರೆದಿದ್ದ. ನಿಜವೆಂದು ನಂಬಿದ ಆಕೆ ಅಲ್ಲಿಗೆ ಬಂದಿದ್ದಳು. ಆತ ಅಲ್ಲಿನ ಲಾಡ್ಜ್‌ಗೆ ಕರೆದೊಯ್ದು ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದ. ಬಳಿಕ ಆಕೆ ಗರ್ಭಿಣಿಯಾಗಿದ್ದಳು. ಮದುವೆಯಾಗುವಂತೆ ಒತ್ತಾಯ ಮಾಡಿದರೂ ಆತ ನಿರಾಕರಿಸಿದ್ದ. ಕರೆ ಮಾಡಿದಾಗ ಕರೆ ಸ್ವೀಕರಿಸುತ್ತಿರಲಿಲ್ಲ. ಆತ ಮೋಸ ಮಾಡಿರುವುದನ್ನು ಅರಿತು ಬೆಳ್ತಂಗಡಿಯ ಸಾಂತ್ವನ ಕೇಂದ್ರಕ್ಕೆ ದೂರು ನೀಡಿದ್ದಳು. ಅಲ್ಲಿ ವಿಚಾರಣೆ ನಡೆದಿತ್ತು. ಆದರೆ ಪ್ರವೀಣ ಅಲ್ಲಿಗೆ ಬಂದಿರಲಿಲ್ಲ. ನಾಗೇಶ ಮಾತ್ರ ಬಂದು ಹೋಗಿದ್ದ. ಈ ಸಂದರ್ಭ ಆಕೆಗೆ ಪ್ರವೀಣ ಇಬ್ಬರ ಮಕ್ಕಳ ತಂದೆ ಎಂಬ ವಿಷಯ ಗೊತ್ತಾಯಿತು.
ಯುವತಿ 2015 ಜುಲೈ 8 ರಂದು ಬೆಳ್ತಂಗಡಿ ಠಾಣೆಗೆ ಪ್ರವೀಣನ ವಿರುದ್ಧ ಅತ್ಯಾಚಾರ ದೂರು ನೀಡಿದ್ದಳು. ದೂರು ದಾಖಲಾಗಿ ಎರಡು ತಿಂಗಳ ಬಳಿಕ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಪ್ರವೀಣನಿಗೆ ಅತ್ಯಾಚಾರ ನಡೆಸಲು ಸಹಕರಿಸಿದ್ದ ನಾಗೇಶ ಕೂಡಾ ಆರೋಪಿಯಾಗಿದ್ದ. ಈತ ತಲೆಮರೆಸಿಕೊಂಡು ಬಳಿಕ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ. ಪ್ರವೀಣ್ ಬಂಧಿತನಾಗಿ 2015 ಜುಲೈ 15 ರಿಂದ 2017 ಫೆ.16 ರ ತನಕ ನ್ಯಾಯಾಂಗ ಬಂಧನದಲ್ಲಿದ್ದ.
ಬೆಳ್ತಂಗಡಿ ಠಾಣೆಯ ಆಗಿನ ಇನ್‌ಸ್ಪೆಕ್ಟರ್ ಬಿ.ಲಿಂಗಪ್ಪ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರಕಾರಿ ಅಭಿಯೋಜಕ ಜ್ಯುಡಿತ್ ಒ.ಎಂ ಕ್ರಾಸ್ತಾ ಸಾಕ್ಷಿ ವಿಚಾರಣೆ ನಡೆಸಿದ್ದರು.







