ಕಡಂಗ ಕೊಕ್ಕಂಡಬಾಣೆ ಉರೂಸ್‌ಗೆ ಇಂದು ಚಾಲನೆ
ಮಡಿಕೇರಿ, ಫೆ.16: ವೀರಾಜಪೇಟೆ ತಾಲೂಕಿನ ಕಡಂಗ ಕೊಕ್ಕಂಡಬಾಣೆ ದರ್ಗಾ ಶರೀಫ್‌ನ ವಲಿಯುಲ್ಲಾಹಿರವರ ಹೆಸರಿನಲ್ಲಿ ಪ್ರತೀ ವರ್ಷ ಆಚರಿಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮ ಈ ಬಾರಿ ಫೆ.17 ರಿಂದ 21 ರವರೆಗೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉರೂಸ್ ಸಮಿತಿಯ ಸಹಕಾರ್ಯದರ್ಶಿ ಸಿ.ಎ. ಸುಬೈರ್, ಕಡಂಗ ಕೊಕ್ಕಂಡ ಬಾಣೆಯಲ್ಲಿ 5 ದಿನಗಳ ಕಾಲ ನಡೆಯುವ ಉರೂಸ್ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಫೆ.17ರಂದು ಮಧ್ಯಾಹ್ನ 3 ಗಂಟೆಗೆ ಕಡಂಗ ಮುಸ್ಲಿಮ್ ಜಮಾಅತ್ ಅಧ್ಯಕ್ಷ ಕೆ.ಎ. ಇಬ್ರಾಹೀಂ ಅವರು ಧ್ವಜಾರೋಹಣ ಮಾಡುವ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ರಾತ್ರಿ 8:30 ಕ್ಕೆ ಉರೂಸ್‌ಗೆ ಚಾಲನೆ ನೀಡಲಾಗುವುದು. ಫೆ.18 ರಂದು ರಾತ್ರಿ ವಯನಾಡಿನ ಜಾಫರ್ ವಾಫಿ ಅವರು ಮುಖ್ಯ ಭಾಷಣ ಮಾಡಲಿದ್ದು, ಸಂಶುಲ್ ಉಲಮಾ ಇಸ್ಲಾಮಿಕ್ ಅಕಾಡಮಿ ವತಿಯಿಂದ ಬುರ್ದಾ ಮಜ್‌ಲಿಸ್ ಕಾರ್ಯಕ್ರಮ ನಡೆಯಲಿದೆ.
ಫೆೆ.19 ಮತ್ತು 20ರಂದು ಪ್ರೌಢೋಜ್ವಲ ಪ್ರಭಾಷಕ ಇ.ಪಿ. ಅಬೂಬಕರ್ ಅಲ್ ಖಾಸಿಮಿ ಪತ್ತರಾನಪುರಂ ಅವರು ಕೌಟುಂಬಿಕ ಜೀವನ ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ. ಫೆ.21 ರಂದು ಸಂಜೆ ದಫ್ ಸಂಘದ ವತಿಯಿಂದ ದಫ್ ರಾತೀಬ್ ಕಾರ್ಯಕ್ರಮ ನಡೆಯಲಿದ್ದು, ಪ್ರಾರ್ಥನೆಯ ನಂತರ ಸಂಜೆ 4:30ಕ್ಕೆ ಸಾರ್ವಜನಿಕ ಅನ್ನದಾನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆಯೆಂದು ಸಿ.ಎ. ಸುಬೈರ್ ತಿಳಿಸಿದ್ದಾರೆ.
ಸೌಹಾರ್ದ ಕೇಂದ್ರವಾಗಿರುವ ಕಡಂಗ ಕೊಕ್ಕಂಡಬಾಣೆ ದರ್ಗಾ ಶರೀಫ್‌ನಲ್ಲಿ ಪ್ರತಿದಿನ ಪಾಲಚಂಡ ಕುಟುಂಬಸ್ಥರು ದೀಪ ಹಚ್ಚುವ ಸಂಪ್ರದಾಯವಿದೆ. ಎಲ್ಲ ರೀತಿಯಲ್ಲೂ ಶಾಂತಿ ಸೌಹಾರ್ದ ಹಾಗೂ ಒಗ್ಗಟ್ಟಿನ ಸಂದೇಶ ಸಾರುವ ಕಡಂಗ ಉರೂಸ್‌ನಲ್ಲಿ ಸರ್ವ ಧರ್ಮೀಯರು ಪಾಲ್ಗ್ಗೊಳ್ಳುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಪಿ.ಎಂ. ಕುಂಞಿ ಅಬ್ದುಲ್ಲಾ, ಕಾರ್ಯದರ್ಶಿ ಪಿ.ಎ. ಅಬ್ದುರ್ರಹಮಾನ್, ಸದಸ್ಯ ಕೆ.ಎ.ಸಿದ್ದಿಖ್, ಮುಖ್ಯೋಪಾಧ್ಯಾಯ ವೈ.ಯು. ನೌಶಾದ್ ಫೈಝಿ ಉಪಸ್ಥಿತರಿದ್ದರು.







