ಸಚಿನ್ ತೆಂಡುಲ್ಕರ್‌ರ ಮತ್ತೊಂದು ದಾಖಲೆ ಮುರಿಯುವ ಹಾದಿಯಲ್ಲಿ ಕೊಹ್ಲಿ!

ಹೊಸದಿಲ್ಲಿ, ಫೆ.16: ಕಳೆದ ಕೆಲವು ವರ್ಷಗಳಿಂದ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಭಾರತದ ನಾಯಕ 2016ರಲ್ಲಿ ಎಲ್ಲ 3 ಪ್ರಕಾರದ ಕ್ರಿಕೆಟ್ ಪಂದ್ಯದಲ್ಲಿ ರನ್‌ಮಳೆ ಹರಿಸುವುದರೊಂದಿಗೆ ವಿಶ್ವ ಕ್ರಿಕೆಟ್‌ನಲ್ಲಿ ಗಮನ ಸೆಳೆದಿದ್ದರು. ಕಳೆದ ನಾಲ್ಕು ಟೆಸ್ಟ್ ಸರಣಿಯಲ್ಲಿ ದ್ವಿಶತಕ ಸಿಡಿಸಿ ಭಾರತ ಟೆಸ್ಟ್ ಸರಣಿಯಲ್ಲಿ ಅಮೋಘ ಸಾಧನೆ ಮಾಡಲು ನೆರವಾಗಿದ್ದರು.
ಕೊಹ್ಲಿ ಇನ್ನೂ ಹಲವು ದಾಖಲೆ ಮುರಿಯುವತ್ತ ಚಿತ್ತವಿರಿಸಿದ್ದು, ಫೆ.23 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಭಾರತದ ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ಅವರು ಐಸಿಸಿ ಸಾರ್ವಕಾಲಿಕ ಬ್ಯಾಟಿಂಗ್ ಪಟ್ಟಿಯ ರೇಟಿಂಗ್ ಪಾಯಿಂಟ್‌ನಲ್ಲಿ ನಿರ್ಮಿಸಿರುವ ದಾಖಲೆ ಮುರಿಯಲು ಎದುರು ನೋಡುತ್ತಿದ್ದಾರೆ.
ಹೈದರಾಬಾದ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಏಕೈಕ ಟೆಸ್ಟ್ ಆರಂಭಕ್ಕೆ ಮೊದಲು ಕೊಹ್ಲಿ 875 ಅಂಕಗಳನ್ನು ಸಂಪಾದಿಸಿದ್ದರು. ನೆರೆಯ ರಾಷ್ಟ್ರದ ವಿರುದ್ಧ ಪಂದ್ಯದಲ್ಲಿ ಡಬಲ್ ಸೆಂಚುರಿ ಬಾರಿಸಿದ್ದ ಕೊಹ್ಲಿ ಒಟ್ಟು 895 ಅಂಕಗಳನ್ನು ಗಳಿಸಿ ಐಸಿಸಿ ಆಲ್‌ಟೈಮ್ ಬ್ಯಾಟಿಂಗ್ ಲೀಸ್ಟ್‌ನಲ್ಲಿ ಸ್ಟೀವ್‌ವಾ ಹಾಗೂ ಆ್ಯಂಡಿ ಫ್ಲವರ್ ಅವರೊಂದಿಗೆ 33ನೆ ಸ್ಥಾನವನ್ನು ಹಂಚಿಕೊಂಡಿದ್ದಾರೆ.
2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ತೆಂಡುಲ್ಕರ್ 898 ಅಂಕಗಳೊಂದಿಗೆ ಪಟ್ಟಿಯಲ್ಲಿ 31ನೆ ಸ್ಥಾನದಲ್ಲಿದ್ದಾರೆ. ಮುಂಬರುವ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸಿದರೆ ಲೆಜಂಡರಿ ಬ್ಯಾಟ್ಸ್‌ಮನ್ ತೆಂಡುಲ್ಕರ್ ದಾಖಲೆಯನ್ನು ಮುರಿಯುವುದು ನಿಶ್ಚಿತ.
ಭಾರತೀಯ ಆಟಗಾರರ ಪೈಕಿ ಒಟ್ಟು 916 ಅಂಕ ಗಳಿಸಿರುವ ಸುನೀಲ್ ಗವಾಸ್ಕರ್ ಆಲ್‌ಟೈಮ್ ರೆಕಾರ್ಡ್‌ನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯದ ದಂತಕತೆ ಡಾನ್ ಬ್ರಾಡ್ಮನ್ 961 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
ತನ್ನ ಆದರ್ಶ ಆಟಗಾರ ಹಾಗೂ ಮಾಜಿ ಸಹ ಆಟಗಾರ ಸಚಿನ್ ತೆಂಡುಲ್ಕರ್ ಅವರೊಂದಿಗೆ ಕೊಹ್ಲಿ ಉತ್ತಮ ಬಾಂಧವ್ಯ ಉಳಿಸಿಕೊಂಡಿದ್ದಾರೆ. ಕೊಹ್ಲಿ-ತೆಂಡುಲ್ಕರ್ ಅವಕಾಶ ಲಭಿಸಿದಾಗಲೆಲ್ಲಾ ಪರಸ್ಪರ ಶ್ಲಾಘಿಸಿಕೊಳ್ಳುತ್ತಾರೆ.
ಬಾಂಗ್ಲಾದ ವಿರುದ್ಧ ಕೊಹ್ಲಿ ದ್ವಿಶತಕ ಬಾರಿಸಿದಾಗ ತೆಂಡುಲ್ಕರ್ ಟ್ವಿಟ್ಟರ್‌ನಲ್ಲಿ ಕೊಹ್ಲಿಯ ಸಾಧನೆಯನ್ನು ಕೊಂಡಾಡಿದ್ದರು.







