ಗಿಳಿವಿಂಡುವಿನಲ್ಲಿ ಗೋವಿಂದ ಪೈ ಕವನಗಳ ನೃತ್ಯ ಪ್ರಸ್ತುತಿ

ಮಂಜೇಶ್ವರ, ಫೆ.16: ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರತಿಷ್ಠಾನದ ವತಿಯಿಂದ ಗಿಳಿವಿಂಡು ಸಂಕೀರ್ಣದ ‘ಪಾರ್ತಿಸುಬ್ಬ ವೇದಿಕೆ’ಯಲ್ಲಿ ಪೈಯವರ ‘ಭಾರತಾಂಬೆ ಮಹಿಮೆ’, ‘ತೌಳವ ಮಾತೆ’ ಮತ್ತು ‘ಕನ್ನಡಿಗರ ತಾಯಿ’ ಎಂಬ ಕವನಗಳ ನೃತ್ಯ ಪ್ರಸ್ತುತಿ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
ಮಂಜೇಶ್ವರದ ನಾಟ್ಯ ನಿಲಯದ ಬಾಲಕೃಷ್ಣ ಮಾಸ್ಟರ್ ಬಳಗವು ಈ ಕಾರ್ಯಕ್ರಮ ನಡೆಸಿಕೊಟ್ಟಿತು.
ಪ್ರತಿಷ್ಠಾನದ ಟ್ರಸ್ಟಿ ಡಾ.ರಮಾನಂದ ಬನಾರಿ ಮಾತನಾಡಿ, ಪ್ರತಿಷ್ಠಾನ ನಡೆಸಲುದ್ದೇಶಿಸಿರುವ ಸರಣಿ ಕಾರ್ಯಕ್ರಮದ ಮೊದಲ ಪ್ರಸ್ತುತಿ ಇದಾಗಿದೆ. ವರ್ಷದುದ್ದಕ್ಕೂ ಇಂತಹ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಶ್ರೀಧರ ಏತಡ್ಕ ಕವನಗಳ ವಿವರಣೆ ನೀಡಿದರು. ಟ್ರಸ್ಟಿಗಳಾದ ತೇಜೋಮಯ, ಬಿ.ವಿ.ಕಕ್ಕಿಲ್ಲಾಯ, ಸುಭಾಶ್ಚಂದ್ರ ಕಣ್ವತೀರ್ಣ ಉಪಸ್ಥಿತರಿದ್ದರು.
ಗಿಳಿವಿಂಡುವಿನ ಆಡಳಿತಾಧಿಕಾರಿ ಡಾ.ಕಮಲಾಕ್ಷ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಎಸ್.ಎ.ಟಿ. ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ಮಂಜೇಶ್ವರ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್ ಸದಸ್ಯ ಕೆ.ಆರ್.ಜಯಾನಂದ ವಂದಿಸಿದರು.







