ಬಿಸಿಯೂಟದಲ್ಲಿ ಸತ್ತ ಇಲಿ : 9 ವಿದ್ಯಾರ್ಥಿಗಳು ಅಸ್ವಸ್ಥ

ಹೊಸದಿಲ್ಲಿ, ಫೆ.17: ಸತ್ತ ಇಲಿ ಬಿದ್ದ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಪರಿಣಾಮವಾಗಿ 9 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದಿಲ್ಲಿಯ ಸರ್ಕಾರಿ ಶಾಲೆಯೊಂದರಲ್ಲಿ ಗುರುವಾರ ಸಂಭವಿಸಿದೆ.
ದಿಲ್ಲಿಯ ದಿಯೋಲಿಯಲ್ಲಿರುವ ಬಾಲಕರ ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳ ಪೈಕಿ 9 ಮಂದಿಗೆ ಹೊಟ್ಟೆನೋವು, ತಲೆನೋವು ಕಾಣಿಸಿಕೊಂಡಿತು. ತಕ್ಷಣ ಅವರನ್ನು ಮದನ್ ಮೋಹನ್ ಮಾಳವೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಊಟದಲ್ಲಿ ಸತ್ತ ಇಲಿ ಬಿದ್ದಿರುವುದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ದಿಲ್ಲಿಯ ಉಪ ಮುಖ್ಯ ಮಂತ್ರಿ ಮನೀಶ್ ಸಿಸೋಡಿಯಾ ವಿದ್ಯಾರ್ಥಿಗಳು ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಿಸಿಯೂಟ ಆಹಾರ ಪೂರೈಕೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಉಪಮುಖ್ಯ ಮಂತ್ರಿ ಸಿಸೋಡಿಯಾ ಅವರು ಹೇಳಿದ್ದಾರೆ.