ಬ್ಯೂಟಿ ಸಲೂನ್ ಆರಂಭಿಸಲಿರುವ ಕೇರಳ ಜೈಲು

ತಿರುವನಂತಪುರ, ಫೆ.17: ರಾಜ್ಯದಲ್ಲಿಯ ಅತ್ಯಂತ ಹಳೆಯ ಜೈಲುಗಳಲ್ಲಿ ಒಂದಾಗಿರುವ ಇಲ್ಲಿಯ ಪೂಜಪ್ಪುರ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳು ಶೀಘ್ರವೇ ಬ್ಯೂಟಿಷಿಯನ್‌ಗಳ ವೇಷದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಾಜ್ಯ ಬಂದೀಖಾನೆಗಳ ಇಲಾಖೆಯು ಕೈದಿಗಳಿಗಾಗಿ ವಿವಿಧ ಪುನರ್ವಸತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ಈಗಾಗಲೇ ಸಿದ್ಧ ಆಹಾರ ದಿಂದ ಹಿಡಿದು ಗಾರ್ಮೆಂಟ್ ತಯಾರಿಕೆಯವರೆಗೆ ಹಲವಾರು ಯಶಸ್ವಿ ಉಪಕ್ರಮಗಳನ್ನು ಕೈಗೊಂಡು ಯಶಸ್ವಿಯಾಗಿರುವ ಪೂಜಪ್ಪುರ ಜೈಲು ಸಾರ್ವಜನಿಕರಿಗಾಗಿ ಅಗ್ಗದ ದರಗಳಲ್ಲಿ ಅತ್ಯುತ್ತಮ ಸೇವೆ ಒದಗಿಸುವ ಬ್ಯೂಟಿ ಸಲೂನ್ ಆರಂಭಿಸಲಿದೆ.
ಜೈಲಿನ ಸಮೀಪವಿರುವ, ಬಳಕೆಯಲ್ಲಿಲ್ಲದ ಹಳೆಯ ಕಟ್ಟಡವೊಂದನ್ನು ನವೀಕರಿಸ ಲಾಗುತ್ತಿದ್ದು, ಏರ್-ಕಂಡಿಷನರ್ ಸೌಲಭ್ಯ ಮತ್ತು ಆಧುನಿಕ ಪೀಠೋಪಕರಣಗಳಿಂದ ಸಜ್ಜಿತ ಪುರುಷರ ಸಲೂನ್ ಇಲ್ಲಿ ತಲೆಯೆತ್ತಲಿದೆ.
ಇದು ರಾಜ್ಯದಲ್ಲಿ ಕೈದಿಗಳು ನಿರ್ವಹಿಸುವ ಎರಡನೇ ಬ್ಯೂಟಿ ಸಲೂನ್ ಆಗಲಿದೆ. ಕಣ್ಣೂರು ಜಿಲ್ಲೆಯ ಕೇಂದ್ರ ಕಾರಾಗೃಹದಲ್ಲಿ ‘ಫೀನಿಕ್ಸ ಫ್ರೀಡಂ ಎಕ್ಸಪ್ರೆಷನ್ಸ್ ’ಹೆಸರಿನ ಸಲೂನ್ ಇತ್ತೀಚೆಗಷ್ಟೇ ಆರಂಭಗೊಂಡಿದ್ದು,ಸಾರ್ವಜನಿಕರ ಉತ್ತಮ ಸ್ಪಂದನ ವ್ಯಕ್ತವಾಗಿದೆ.
ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ಸಲೂನ್ ಆರಂಭೊಳ್ಳಲಿದೆ. ನಗರದ ಪಾಲಿಟೆಕ್ನಿಕ್ ನ ಇಬ್ಬರು ಶಿಕ್ಷಕರು ಕೈದಿಗಳಿಗೆ ಬ್ಯೂಟಿಷಿಯನ್ ಕೋರ್ಸ್‌ನಲ್ಲಿ ತರಬೇತಿ ನೀಡಲಿದ್ದಾರೆ ಎಂದು ಪೂಜಪ್ಪುರ ಜೈಲು ಅಧೀಕ್ಷಕ ಎಸ್.ಸಂತೋಷ ತಿಳಿಸಿದರು.







