ಲಕ್ನೋದ ವೋಟರ್ ನಂ.141 ಈ ಬಾರಿಯೂ ತಪ್ಪಿಸುವ ಸಾಧ್ಯತೆ

ಲಕ್ನೋ,ಫೆ.17: ಲಕ್ನೋ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 141ನೇ ಸಂಖ್ಯೆ ಹೊಂದಿರುವ ವ್ಯಕ್ತಿ ಈ ಬಾರಿಯೂ ಮತದಾನಕ್ಕೆ ಹಾಜರಾಗದಿರುವ ಸಾಧ್ಯತೆ ಹೆಚ್ಚಾಗಿದೆ. ಅಂದ ಹಾಗೆ ಈ ಮತದಾರರ ಹೆಸರು ಅಟಲ್ ಬಿಹಾರಿ ವಾಜಪೇಯಿ(92),ಭಾರತದ ಮಾಜಿ ಪ್ರಧಾನಿ !
ನವಾಬರ ನಗರಿ ಲಕ್ನೋ ಲೋಕಸಭಾ ಕ್ಷೇತ್ರದಿಂದ ವಾಜಪೇಯಿ ಸತತ ಐದು ಬಾರಿ ಆಯ್ಕೆಯಾಗಿದ್ದರು.
ವಾಜಪೇಯಿ ಅವರು ಕೊನೆಯ ಬಾರಿಗೆ ಮತ ಚಲಾಯಿಸಿದ್ದು 2004ರ ಲೋಕಸಭಾ ಚುನಾವಣೆಯಲ್ಲಿ. ಅದು ಅವರು ಸ್ಪರ್ಧಿಸಿದ್ದ ಕೊನೆಯ ಚುನಾವಣೆಯೂ ಆಗಿತ್ತು. ಆ ಬಳಿಕ 2007 ಮತ್ತು 2012ರ ವಿಧಾನಸಭಾ ಚುನಾವಣೆಗಳು ಹಾಗೂ 2009 ಮತ್ತು 2014ರ ಲೋಕಸಭಾ ಚುನಾವಣೆಗಳಲ್ಲಿ ಮತದಾನ ಮಾಡಲು ಅವರಿಗೆ ಸಾಧ್ಯವಾಗಿರಲಿಲ್ಲ.
ಕಳೆದ ಕೆಲವು ವರ್ಷಗಳಿಂದ ವೃದ್ಧಾಪ್ಯದ ಕಾಯಿಲೆಗಳಿಂದ ಬಳಲುತ್ತಿರುವ ವಾಜಪೇಯಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ.
ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿಯೂ ಮತ ಚಲಾಯಿಸಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ವಾಜಪೇಯಿ ಅವರ ನಿಕಟ ಸಹಾಯಕ ಶಿವಕುಮಾರ್ ತಿಳಿಸಿದರು.
ಲಕ್ನೋದಲ್ಲಿ ಮತದಾನ ಶನಿವಾರ ನಡೆಯಲಿದೆ. ವಾಜಪೇಯಿಯವರು ಮತದಾನ ಮಾಡಬೇಕಾಗಿರುವ ಮತಗಟ್ಟೆ ಲಕ್ನೋ ಮಹಾನಗರ ಪಾಲಿಕೆ ಕಚೇರಿಯಲ್ಲಿ ಸ್ಥಾಪನೆಗೊಂಡಿದೆ.
1991,1996,1998,1999 ಮತ್ತು 2004ರ ಲೋಕಸಭಾ ಚುನಾವಣೆಗಳಲ್ಲಿ ಲಕ್ನೋ ಕ್ಷೇತ್ರದಿಂದ ವಾಜಪೇಯಿ ಆಯ್ಕೆಯಾಗಿದ್ದರು. 2009 ಮತ್ತು 2014ರ ಲೋಕಸಭಾ ಚುನಾವಣೆಗಳಲ್ಲಿಯೂ ಬಿಜೆಪಿ ಇಲ್ಲಿ ತನ್ನ ಪ್ರಾಬಲ್ಯ ಮೆರೆದಿದ್ದು, ಅನುಕ್ರಮವಾಗಿ ಲಾಲಜಿ ಟಂಡನ್ ಮತ್ತು ರಾಜನಾಥ ಸಿಂಗ್ ಅವರು ಆಯ್ಕೆಯಾಗಿದ್ದರು.







