ಬ್ಯಾಂಕ್ ಗೆ ನುಗ್ಗಿದ ಶಸ್ತ್ರಸಜ್ಜಿತ ಡಕಾಯಿತರಿಂದ ಲಕ್ಷಾಂತರ ರೂ. ದರೋಡೆ
ಪಾಟ್ನಾ,ಫೆ.17 : ಬಂಕ ಜಿಲ್ಲೆಯ ಭಗಲ್ಪುರದಿಂದ 40 ಕಿಮೀ ದೂರದಲ್ಲಿರುವ ಚಾಂದನ್ ಎಂಬ ಗ್ರಾಮದ ಸ್ಟೇಟ್ ಬ್ಯಾಂಕ್ಆಫ್ ಇಂಡಿಯಾ ಶಾಖೆಗೆ ಶುಕ್ರವಾರ ನುಗ್ಗಿದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ರೂ 39 ಲಕ್ಷ ನಗದಿನೊಂದಿಗೆ ಪರಾರಿಯಾಗಿದ್ದಾರೆ.
ಆರು ಮಂದಿಯ ತಂಡವು ಶಾಖೆಯನ್ನು ಪ್ರವೇಶಿಸಿದೊಡನೆಯೇ ಬಂದೂಕು ತೋರಿಸಿ ಎಲ್ಲಾ ಉದ್ಯೋಗಿಗಳು ಹಾಗೂ ಗ್ರಾಹಕರನ್ನು ಬೆದರಿಸಿ ನಂತರ ಕರೆನ್ಸಿ ಚೆಸ್ಟ್ ನಲ್ಲಿದ್ದ ಹಣದೊಂದಿಗೆ ತಮ್ಮ ಮೋಟಾರ್ ಸೈಕಲ್ಲಿನಲ್ಲಿ ಪರಾರಿಯಾದರು.
ಬೆಳಗ್ಗೆ ಶಾಖೆ ಎಂದಿನಂತೆ ದಿನದ ವ್ಯವಹಾರಕ್ಕೆ ತೆರೆದ ಸ್ವಲ್ಪ ಹೊತ್ತಿನಲ್ಲಿಯೇ ಈ ಘಟನೆ ನಡೆದಿದೆ. ಚಾಂದನ್ ಗ್ರಾಮವು ಜಾರ್ಖಂಡ್ ರಾಜ್ಯದ ದಿಯೊಘರ್ ಗೆ ಹತ್ತಿರವಾಗಿದ್ದು, ಜಾರ್ಖಂಡ್ ನ ಹಝಾರಿಬಾಗ್ ಹಾಗೂ ಗಿರಿಡ್ಡಿಯಲ್ಲಿ ನಡೆದ ಬ್ಯಾಂಕ್ ಡಕಾಯಿತಿಯ ಮಾದರಿಯಲ್ಲಿಯೇ ಈ ಡಕಾಯಿತಿಯೂ ನಡೆದಿದೆ.
ಈ ಶಾಖೆಗೆ ಗುರುವಾರದಂದು ಬಂಕಾದಿಂದ ರೂ. 40 ಲಕ್ಷ ಹಣ ಠೇವಣಿ ರೂಪದಲ್ಲಿ ದೊರೆತಿತ್ತು.ಶಾಖೆಯ ಸುರಕ್ಷಾ ಸಿಬ್ಬಂದಿ ಡಕಾಯಿತಿಯ ಸಮಯದಲ್ಲಿ ಹಾಜರಿದ್ದರೂ ಆತ ಡಕಾಯಿತರ ವಿರುದ್ಧ ಕಾರ್ಯಾಚರಿಸದೇ ಇದ್ದಿದ್ದು ಕೂಡ ಸಂಶಯಕ್ಕೆ ಕಾರಣವಾಗಿದೆ.
ಡಕಾಯಿತರನ್ನು ಸೆರೆ ಹಿಡಿಯಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.