ಪುತ್ತೂರು: ಹೋಟೆಲ್ ಕಾರ್ಮಿಕ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು, ಫೆ.17: ಹೋಟೆಲ್ ಕಾರ್ಮಿಕ ಯುವಕನೊಬ್ಬ ವಾಸ್ತವ್ಯದ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಸವಣೂರು ಗ್ರಾಮದ ಸವಣೂರು ಪೇಟೆ ಸಮೀಪ ಶುಕ್ರವಾರ ನಡೆದಿದೆ.
ಪುತ್ತೂರು ತಾಲೂಕಿನ ಕುದ್ಮಾರು ಗ್ರಾಮದ ಪಟ್ಟೆ ನಿವಾಸಿ, ಸವಣೂರಿನ ಮೂಕಾಂಬಿಕಾ ಹೋಟೆಲ್‌ನಲ್ಲಿ ಅಡುಗೆ ಕಾರ್ಮಿಕರಾಗಿ ದುಡಿಯುತ್ತಿದ್ದ ಪ್ರವೀಣ್ ಪೂಜಾರಿ (28) ಆತ್ಮಹತ್ಯೆ ಮಾಡಿಕೊಂಡವರು.
ಸವಣೂರಿನ ಮೂಕಾಂಬಿಕಾ ಹೋಟೆಲ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಅಡುಗೆ ಕಾರ್ಮಿಕರಾಗಿ ದುಡಿಯುತ್ತಿದ್ದ ಪ್ರವೀಣ್ ಪೂಜಾರಿ ಅವರು ಹೋಟೆಲ್‌ನ ಇತರ ಕಾರ್ಮಿಕರ ಜೊತೆ ಸವಣೂರು ಪೇಟೆಗೆ ಸಮೀಪದಲ್ಲೇ ಇರುವ ಕೊಠಡಿಯೊಂದರಲ್ಲಿ ವಾಸ್ತವ್ಯವಿದ್ದರು. ಕಳೆದ ಮೂರು ದಿನಗಳಿಂದ ಕೆಲಸಕ್ಕೆ ಬಾರದೆ ರಜೆಯಲ್ಲಿದ್ದ ಪ್ರವೀಣ್ ಪೂಜಾರಿ ಅವರು ತನ್ನ ಮನೆಗೆ ತೆರಳದೆ ಹೋಟೆಲ್ ನೌಕರರ ವಾಸ್ತವ್ಯದ ಕೊಠಡಿಯಲ್ಲೇ ಉಳಿದುಕೊಂಡಿದ್ದರು.
ಶುಕ್ರವಾರ ಕೆಲಸಕ್ಕೆ ಬರುವುದಾಗಿ ಹೋಟೆಲ್ ಮಾಲಕರಲ್ಲಿ ತಿಳಿಸಿದ್ದರು. ಶುಕ್ರವಾರ ಬೆಳಿಗ್ಗೆಯೂ ಪ್ರವೀಣ್ ಪೂಜಾರಿ ಅವರು ಕೆಲಸಕ್ಕೆ ಬಾರದ ಹಿನ್ನಲೆಯಲ್ಲಿ ಹೋಟೆಲ್ ಸಿಬ್ಬಂದಿಯೊಬ್ಬರು ಕೊಠಡಿಗೆ ತೆರಳಿ ಪರಿಶೀಲಿಸಿದಾಗ ಕೊಠಡಿಯೊಳಗೆ ಪ್ರವೀಣ್ ಪೂಜಾರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಪ್ರವೀಣ್ ಪೂಜಾರಿ ಅವರು ಕೊಠಡಿಯ ಎದುರಿನ ಬಾಗಿಲ ಚಿಲಕ ಹಾಕಿಕೊಂಡು ಒಳಗಡೆ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಯ ಕುರಿತು ಮೃತರ ಸಹೋದರ ಬಾಲಚಂದ್ರ ಪೂಜಾರಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







