ಪ್ರತಿಯೊಬ್ಬರ ಮನಸ್ಸು ಮಕ್ಕಳ ಮನಸ್ಸಾಗಲಿ- ಸಚಿವ ರಮಾನಾಥ ರೈ
ಬಾಲನವದಲ್ಲಿ ಮಕ್ಕಳ ಹಬ್ಬ: ಕಾರಂತಜ್ಜರ ಕರ್ಮಭೂಮಿಯಲ್ಲಿ ಕುಣಿದಾಡಿದ ಮಕ್ಕಳು

ಪುತ್ತೂರು, ಫೆ.17: ಇಲ್ಲಿನ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಸಂಜೆಯತನಕ ಜಿಲ್ಲಾ ಮಟ್ಟದ ಮಕ್ಕಳ ಹಬ್ಬ ನಡೆಯಿತು. ಸಾವಿರಾರು ಶಾಲಾ ಪುಟಾಣಿಗಳು ದಿನವಿಡೀ ಬಾಲವನದಲ್ಲಿ ಮನಸೋ ಇಚ್ಚೆ ಆಡಿ ಓಡಾಡಿ, ಹಾಡಿ ಕುಣಿದು ಕುಪ್ಪಳಿಸಿದರು.
ಕರ್ನಾಟಕ ಬಾಲವಿಕಾಸ ಅಕಾಡಮಿ ದಾರವಾಡ, ಜಿಲ್ಲಾ ಕಾರ್ಯಾನುಷ್ಠಾನ ಸಮಿತಿ, ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಡಾ. ಶಿವರಾಮ ಕಾರಂತ ಬಾಲವನ, ಸಾರ್ವಜನಿಕ ಶಿಕ್ಷಣ ಇಲಾಖೆ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಬಾಲವನದಲ್ಲಿ ಮಕ್ಕಳ ಹಬ್ಬ ನಡೆಸಲಾಯಿತು.
"ಬಾಲ್ಯ ಅರಳಲಿ, ಬದುಕು ಬೆಳಗಲಿ" ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಮಕ್ಕಳ ಹಬ್ಬದಲ್ಲಿ ಶಾಲೆಯ ಶಿಸ್ತು, ಶಿಕ್ಷಕರ ಉಪದೇಶ ಎಲ್ಲವನ್ನೂ ಇಲ್ಲಿ ಮರೆತು ಪುಟಾಣಿಗಳು ಹಾಡು, ನೃತ್ಯ. ಸಾಹಸ ಪ್ರದರ್ಶನ, ನಾಟಕ. ಯಕ್ಷಗಾನ ಪ್ರದರ್ಶನ ನಡೆಸಿದರು. ಬಾಲವನದ ಸುತ್ತಾ ಓಡಾಡಿ ಕುಣಿದು ಕುಪ್ಪಳಿಸಿ ಸಂತೋಷಪಟ್ಟರು.
ಸಾನಿಧ್ಯ ವಿಶೇಷ ಮಕ್ಕಳ ಶಾಲಾ ವಿದ್ಯಾರ್ಥಿಗಳಿಂದ ವಿಶೇಷ ಕಾರ್ಯಕ್ರಮ, ಕ್ಲೇ ಮಾಡೆಲಿಂಗ್, ಚಿತ್ರಕಲೆ, ಮಲ್ಲಕಂಬ, ರೋಪ್‌ವೇ ಸಾಹಸ ಪ್ರದರ್ಶನ, ಜಿಬಿಲಿ ಆಟ, ಮಡಕೆ ಒಡೆಯುವುದು, ಕವ್ವಾಲಿ, ದೇಶಭಕ್ತಿಗೀತೆ, ರಂಗಗೀತೆ, ಇನ್ನಿತರ ಹತ್ತು ಹಲವಾರು ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಮಕ್ಕಳು ರಂಜಿಸುವುದರೊಂದಿಗೆ ನೋಡುಗರ ಮನಗೆದ್ದರು.
ಪ್ರತಿಯೊಬ್ಬರ ಮನಸ್ಸು ಮಕ್ಕಳ ಮನಸ್ಸಾಗಲಿ- ಸಚಿವ ರಮಾನಾಥ ರೈ:
ಮಕ್ಕಳ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು, ಬಲಾಡ್ಯ ಸಮಾಜ ನಿರ್ಮಾಣದಲ್ಲಿ ಮಹಿಳೆ ಮತ್ತು ಮಕ್ಕಳ ಇಲಾಖೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು, ಮಕ್ಕಳ ಮನಸ್ಸು ಯಾವುದೇ ಜಾತಿ, ಧರ್ಮ, ದ್ವೇಷಗಳಿಲ್ಲದೆ ಪರಿಶುದ್ಧವಾಗಿದೆ. ಬೆಳೆದಂತೆ ಹೆತ್ತವರು ಮತ್ತು ಸಮಾಜ ಅವರಲ್ಲಿ ಇವೆಲ್ಲವನ್ನೂ ಕಲಿಸುತ್ತಾರೆ. ಪ್ರತಿಯೊಬ್ಬರ ಮನಸ್ಸು ಮಕ್ಕಳ ಮನಸ್ಸಾಗಲಿ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಕ್ಕಳ ಬದುಕಿನ ಸಾಮಾಜಿಕ ಸಮಸ್ಯೆಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದು, ಮಕ್ಕಳ ಮತ್ತು ಮಹಿಳೆಯರ ಮರಣ ನಿಯಂತ್ರಣದಲ್ಲಿ ಪ್ರಗತಿ ಸಾಧಿಸುತ್ತಿದೆ. ಅಂಗನವಾಡಿಗಳ ಮೂಲಕ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ, ಕಿಶೋರಿಯರಿಗೆ ಪೌಶ್ಟಿಕ ಆಹಾರ ನೀಡುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಿಸುತ್ತಿದೆ ಎಂದರು.
ಬೀರಮಲೆ ಬೆಟ್ಟವನ್ನು ಟ್ರೀಪಾರ್ಕ್ ಆಗಿ ಅಭಿವೃದ್ಧಿ:
ಪುತ್ತೂರಿನ ಐತಿಹಾಸಿಕ ಬೀರಮಲೆ ಬೆಟ್ಟವನ್ನು ಟ್ರೀಪಾರ್ಕ್ ಆಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗುವುದು ಎಂದ ಸಚಿವರು ತಾನು ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಯೋಜನೆಗಳನ್ನು ರೂಪಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಬಾಲವನದಲ್ಲಿ ಮಕ್ಕಳ ಧ್ವನಿ ಪ್ರತಿಧ್ವನಿಸುತ್ತಿರುವುದು ಕಾರಂತರ ಆತ್ಮಕ್ಕೆ ಶಾಂತಿಯನ್ನು ನೀಡಬಹುದು. ಕಾರಂತರ ಮಕ್ಕಳ ಪ್ರೀತಿಗೆ ಮಕ್ಕಳ ಹಬ್ಬ ಜೀವಂತಿಕೆಯ ಸಾಕ್ಷಿಯಾಗಿದೆ ಎಂದ ಅವರು ಜಿಲ್ಲಾ ಮಟ್ಟದ ಈ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆಯು ನಿರೀಕ್ಷಿತ ಸಹಕಾರ ನೀಡಿಲ್ಲ, ತಾಲೂಕು ಶಿಕ್ಷಣಾಧಿಕಾರಿಗಳು, ಜಿಲ್ಲಾ ಶಿಕ್ಷಣಾಧಿಕಾರಿಗಳು ಕಾರ್ಯಕ್ರಮದಲ್ಲಿ ಗೈರುಹಾಜರಾಗಿದ್ದಾರೆ. ಈ ಬಗ್ಗೆ ಉಸ್ತುವಾರಿ ಸಚಿವರು ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಶುಭ ಹಾರೈಸಿದರು. ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಉಪವಿಭಾಗಾಧಿಕಾರಿ ರಘುನಂದನ್ ಮೂರ್ತಿ, ತಹಶೀಲ್ದಾರ್ ಗಾರ್ಗಿ ಜೈನ್, ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಜಿಲ್ಲಾ ಮಕ್ಕಳ ಕಲ್ಯಾಣಾಧಿಕಾರಿ ಉಸ್ಮಾನ್, ಬಾಲವಿಕಾಸ ಅಕಾಡಮಿ ಸದಸ್ಯೆ ಹೇಮ, ತಾಲೂಕು ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಮಾಮಚ್ಚನ್ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕು ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಸ್ವಾಗತಿಸಿದರು. ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಾಂತಿ ಹೆಗಡೆ ವಂದಿಸಿದರು. ಪ್ರೊ. ಬಿ.ಜೆ.ಸುವರ್ಣ ನಿರೂಪಿಸಿದರು.







