ತೆಂಕಮಿಜಾರುವಿನಲ್ಲಿ 63 ನಿವೇಶನ ರಹಿತರಿಗೆ ಫೆ.21ರಂದು ಹಕ್ಕುಪತ್ರ ವಿತರಣೆ : ಬಾಲಕೃಷ್ಣ ದೇವಾಡಿಗ

ಮೂಡುಬಿದಿರೆ, ಫೆ.17: ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ 63 ಜನ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ ಹಾಗೂ ಸರಕಾರದ ವಿವಿಧ ಸೌಲಭ್ಯಗಳ ವಿತರಣೆ ಕಾರ್ಯಕ್ರಮವು ಫೆ.21ರಂದು ನಡೆಯಲಿದೆ ಎಂದು ತೆಂಕಮಿಜಾರು ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಹೇಳಿದರು. ಅವರು ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ತೆಂಕಮಿಜಾರು ಗ್ರಾಮದಲ್ಲಿ 4.78 ಎಕರೆ ಜಾಗವನ್ನು ಪಂಚಾಯತ್ ನಿವೇಶನ ರಹಿತರಿಗೆ ನೀಡಲೆಂದು ಕಾಯ್ದಿರಿಸಿತ್ತು. ಅರ್ಹ ಫಲಾನುಭವಿಗಳನ್ನು ಗುರುತಿಸಿ ಇದೀಗ ಹಕ್ಕುಪತ್ರ ವಿತರಿಸಲು ತೀರ್ಮಾನಿಸಲಾಗಿದೆ. ಈ ನಿವೇಶನಗಳಲ್ಲಿ ಪ್ರತಿಯೊಂದಕ್ಕೂ ರಸ್ತೆ ಸಂಪರ್ಕವನ್ನು ನೀಡಲಾಗಿದ್ದು, ಕುಡಿಯುವ ನೀರಿನ ಸಂಪರ್ಕಕ್ಕಾಗಿ ಅವಕಾಶ ಒದಗಿಸಲಾಗಿದೆ. ಇದರಲ್ಲಿ ಪಂಚಾಯತ್‌ಗೆ, ಅಂಗನವಾಡಿ ನಿರ್ಮಾಣ, ಉದ್ಯಾನವನ ನಿರ್ಮಾಣ ಹಾಗೂ ಘನತ್ಯಾಜ್ಯ ನಿರ್ವಹಣೆಗಳಿಗಾಗಿ ತಲಾ ಎರಡೆರಡು ನಿವೇಶನಗಳನ್ನು ಕಾಯ್ದಿರಿಸಲಾಗಿದೆ ಎಂದವರು ಮಾಹಿತಿ ನೀಡಿದರು.
ನಿವೇಶನ ರಹಿತರಿಗಾಗಿ ತೆಗೆದಿರಿಸಿದ ಕರಿಕುಮೇರು ಪ್ರದೇಶಕ್ಕೆ ಯಕ್ಷಗಾನ ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪ ನಗರಎಂದು ನಾಮಕರಣ ಮಾಡಲಿದ್ದೇವೆ. ಬಡವರಿಗೆ ಹಕ್ಕುಪತ್ರ ನೀಡುವುದರ ಜೊತೆಗೆ ಬಸವ ವಸತಿ ಯೋಜನೆಯಡಿ 63 ಮಂದಿಗೆ ಮನೆ ನಿರ್ಮಾಣಕ್ಕಾಗಿ ತಲಾ 1.20 ಲಕ್ಷ ರೂ.ಗಳಂತೆ ಸಹಾಯಧನದ ಕಾರ್ಯಾದೇಶವನ್ನೂ ವಿತರಿಸಲಾಗುತ್ತದೆ. ಇದೇ ಫಲಾನುಭವಿಗಳಿಗೆ ಮಾಹತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಮನೆ ನಿರ್ಮಾಣಕ್ಕಾಗಿ ಸಹಾಯಧನವಾಗಿ 20,140 ರೂ.ಗಳ ಕಾರ್ಯಾದೇಶವನ್ನೂ ನೀಡಲಾಗುತ್ತದೆ.
ಎರಡನೇ ಹಂತದಲ್ಲಿ 90 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ಮುಂದಿನ ದಿನಗಳಲ್ಲಿ ವಿತರಿಸಲಾಗುವುದುತೆಂಕಮಿಜಾರುವಿನ ಸಂತೆಕಟ್ಟೆ ಎಂಬಲ್ಲಿ 2008ರಲ್ಲಿ ನಿರ್ಮಾಣವಾದ ಮಾರುಕಟ್ಟೆಯು ನಂತರದ ದಿನಗಳಲ್ಲಿ ಬಳಕೆಯಲ್ಲಿದೆ ಪಾಳುಬಿದ್ದ ಸ್ಥಿತಿಯಲ್ಲಿತ್ತು. ಇದೀಗ ಅದನ್ನು ಪಂಚಾಯತ್ ವತಿಯಿಮದ ಪುನರ್‌ನವೀಕರಣಗೊಳಿಸಿ ಅದನ್ನೊಂದು ಸುಸಜ್ಜಿತ ಸಭಾಭವನವನ್ನಾಗಿಸಿ ಗ್ರಾಮದಲ್ಲಿ ನಡೆಯುವ ವಿವಾಹ ಹಾಗೂ ಸಭೆ ಸಮಾರಂಭಗಳಿಗೆ ನೀಡುವ ಯೋಜನೆ ಕಾರ್ಯಗತವಾಗುತ್ತಿದೆ. ಸುಮಾರು 500 ಜನರು ಕುಳಿತುಕೊಳ್ಳಲು ಅವಕಾಶವಿರುವ ಈ ಸಭಾಭವನವನ್ನು ಗ್ರಾಮಸ್ಥರ ಅನುಕೂಲಕ್ಕಾಗಿ ನಿರ್ಮಾಣ ಮಾಡಲಾಗುತ್ತಿದೆಎಂದು ಮಾಹಿತಿ ನೀಡಿದರು.
ತೆಂಕಮಿಜಾರು ಗ್ರಾಮ ಪಂಚಾಯತ್ ಸದಸ್ಯರಾದ ಕರುಣಾಕರ ಶೆಟ್ಟಿ ಹಾಗೂ ಹರಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.







