ಉಡುಪಿ: ಉಪನ್ಯಾಸಕರ ಅಮಾನತು ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಉಡುಪಿ, ಫೆ.17: ಉಡುಪಿ ಪೂರ್ಣಪ್ರಜ್ಞ ಪದವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ದುರ್ಗಾಪ್ರಸಾದ್ ಮಯ್ಯರನ್ನು ಸುಳ್ಳು ಆರೋಪ ಹೊರಿಸಿ ಅಮಾನತುಗೊಳಿಸಿರುವುದಾಗಿ ಆರೋಪಿಸಿ ಕಾಲೇಜಿನ ವಿದ್ಯಾರ್ಥಿಗಳುಶುಕ್ರವಾರ ತರಗತಿಗಳನ್ನು ಬಹಿಷ್ಕರಿಸಿ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಉಪನ್ಯಾಸಕ ದುರ್ಗಾಪ್ರಸಾದ್ 15 ದಿನಗಳ ಹಿಂದೆ ನಡೆದ ಪ್ರಥಮ ಬಿಕಾಂನ ಇಂಟರ್‌ನಲ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದಾರೆ ಮತ್ತು ತಪ್ಪು ಉತ್ತರ ಬರೆದ ವಿದ್ಯಾರ್ಥಿಗಳಿಗೂ ಅಂಕ ನೀಡಿದ್ದಾರೆಂದು ಕಾಲೇಜಿನ ಆಡಳಿತ ಮಂಡಳಿ ಆರೋಪಿಸಿದ್ದು, ಇದಕ್ಕೆ ತಪ್ಪೊಪ್ಪಿಗೆ ಬರೆದು ಕೊಡುವಂತೆ ಮಯ್ಯರಿಗೆ ಸೂಚಿಸಿತ್ತು.
ಆದರೆ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ದುರ್ಗಾಪ್ರಸಾದ್ ತಪ್ಪೊಪ್ಪಿಗೆ ಪತ್ರ ಬರೆಯಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಉಪನ್ಯಾಸಕರ ಮೇಲೆ ತಪ್ಪು ಆರೋಪ ಹೊರಿಸಲಾಗಿದೆ ಎಂದು ಆರೋಪಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ಎಲ್ಲ ತರಗತಿಗಳ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಧರಣಿ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ. ಜಿ.ಎಸ್.ಚಂದ್ರಶೇಖರ್ ಹಾಗೂ ಗೌರವ ಕೋಶಾಧಿಕಾರಿ ಪ್ರದೀಪ್ ಕುಮಾರ್ ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಲು ಯತ್ನಿಸಿದರು.
"ದುರ್ಗಾಪ್ರಸಾದ್ ತಪ್ಪು ಮಾಡಿದ್ದಾರೆ. ಕಾಲೇಜು ಮತ್ತು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ಅವರು ಮಾಡಿದ ತಪ್ಪಿಗೆ ತಪ್ಪೊಪ್ಪಿಗೆ ಬರೆಯುವಂತೆ ತಿಳಿಸಿದ್ದೇವೆ. ಆದರೆ ಅವರು ಬರೆದಿಲ್ಲ. ಸದ್ಯಕ್ಕೆ ನಾವು ಅವರನ್ನು ಅಮಾ ನತು ಮಾಡಿಲ್ಲ ಎಂದು ಡಾ.ಚಂದ್ರಶೇಖರ್ ತಿಳಿಸಿದ್ದಾರೆ.
ಇದನ್ನು ಒಪ್ಪದ ವಿದ್ಯಾರ್ಥಿಗಳು ಪಟ್ಟು ಬಿಡದೆ ತಮ್ಮ ಹೋರಾಟವನ್ನು ಮುಂದುವರೆಸಿ ಘೋಷಣೆಗಳನ್ನು ಕೂಗಿದರು. ಈ ವೇಳೆ ಪ್ರಕರಣ ಇತ್ಯರ್ಥ ಗೊಳಿಸದೆ ಆವರಣದಿಂದ ಹೊರ ಹೋಗಲು ಯತ್ನಿಸಿದ ಡಾ.ಚಂದ್ರಶೇಖರ್ ಹಾಗೂ ಪ್ರದೀಪ್ ಕುಮಾರ್‌ರ ಕಾರನ್ನು ವಿದ್ಯಾರ್ಥಿಗಳು ಅಡ್ಡಗಟ್ಟಿ ಹಿಂದಕ್ಕೆ ಕಳುಹಿಸಿದರು.
ಬಳಿಕ ತನ್ನ ತಾಯಿ ಗೋಪಮ್ಮ ಜೊತೆ ಆಗಮಿಸಿದ ಉಪನ್ಯಾಸಕ ದುರ್ಗಾ ಪ್ರಸಾದ್ ಮಯ್ಯ ವಿದ್ಯಾರ್ಥಿಗಳೊಂದಿಗೆ ಸೇರಿ ಪ್ರತಿಭಟನೆ ನಡೆಸಿದರು. "ನನ್ನ ಮಗನಿಗೆ ಏನಾದರೂ ತೊಂದರೆ ಆದಲ್ಲಿ ಅದಕ್ಕೆ ಕಾಲೇಜು ಆಡಳಿತ ಮಂಡಳಿಯೇ ಕಾರಣವಾಗುತ್ತದೆ. ನನ್ನ ಮಗ ಎಂದಿಗೂ ತಪ್ಪು ಮಾಡಲ್ಲ. ಅವನಿಗೆ ನ್ಯಾಯ ಸಿಗಲೇಬೇಕು" ಎಂದು ಗೋಪಮ್ಮ ಆಗ್ರಹಿಸಿದರು.
ಬಳಿಕ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿ ಗಳು ಸೇರಿ ಮಾತುಕತೆ ನಡೆಸಿ ಪ್ರಕರಣವನ್ನು ಇತ್ಯರ್ಥ ಪಡಿಸಿದರು. ಱನನ್ನ ಮೇಲೆ ಆರೋಪ ಸಾಬೀತು ಪಡಿಸುವಲ್ಲಿ ಆಡಳಿತ ಮಂಡಳಿ ವಿಫಲ ವಾಗಿದೆ. ಕೊನೆಗೂ ನನಗೆ ನ್ಯಾಯ ಸಿಕ್ಕಿದೆ. ಆದರೂ ನಾನು ಇನ್ನು ಈ ಕಾಲೇಜಿನಲ್ಲಿ ಮುಂದುವರಿಯುವುದಿಲ್ಲೞಎಂದು ದುರ್ಗಾಪ್ರಸಾದ್ ತಿಳಿಸಿ ದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾಲೇಜು ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ದುರ್ಗಾಪ್ರಸಾದ್ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ನೀಡಿ ಉತ್ತರ ಬರೆಸಿದ್ದಾರೆ. ತಪ್ಪು ಉತ್ತರಕ್ಕೂ ಅಂಕ ನೀಡಿದ್ದಾರೆ. ಇವರು ಮಾಡಿರುವ ತಪ್ಪಿಗೆ ಸಂಬಂಧಿ ಸಿದ ದಾಖಲೆಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿದ್ದೇವೆ. ಈಗಾಗಲೇ ಎಲ್ಲ ಉತ್ತರ ಪತ್ರಿಕೆಗಳನ್ನು ನಾವು ವಶಪಡಿಸಿಕೊಂಡಿದ್ದೇವೆ. ಇವರು ಮಾಡಿದ ತಪ್ಪಿನಿಂದ ಪ್ರತಿಭಾವಂತ ಮಕ್ಕಳಿಗೆ ಅನ್ಯಾಯ ಆಗಿದೆ. ಈ ಬಗ್ಗೆ ಮಂಗಳೂರು ವಿವಿಗೆ ವರದಿ ನೀಡಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸ ಲಾಗುವುದು.
-ಪ್ರದೀಪ್ ಕುಮಾರ್, ಗೌರವ ಕೋಶಾಧಿಕಾರಿ, ಆಡಳಿತ ಮಂಡಲಿ, ಪಿಪಿಸಿ.
ಇಂಟರ್ನಲ್ ಪರೀಕ್ಷೆಗೆ ಸಂಬಂಧಿಸಿ ಮಾದರಿ ಪ್ರಶ್ನೆಗಳನ್ನು ನೀಡುವಂತೆ ನಾವು ಕೇಳಿದ್ದೆವು. ಅದರಂತೆ ಉಪನ್ಯಾಸಕರು ಏಳು ಪ್ರಮುಖ ಪ್ರಶ್ನೆಗಳನ್ನು ನೀಡಿದ್ದರು. ಆದರೆ ಅವುಗಳು ಪರೀಕ್ಷೆಯಲ್ಲಿ ಬಂದಿಲ್ಲ. ಆದರೂ ಇವರ ವಿರುದ್ಧ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಮಾಡಲಾಗಿದೆ. ಇದೀಗ ತಪ್ಪು ಬರೆದವರಿಗೂ ಅಂಕ ನೀಡಿದ್ದಾರೆಂಬ ಆರೋಪ ಮಾಡಲಾಗುತ್ತಿದೆ. ಆದರೆ ಆಡಳಿತ ಮಂಡಳಿ ಅದಕ್ಕೆ ಬೇಕಾದ ಸಾಕ್ಷ ತೋರಿಸುತ್ತಿಲ್ಲ. ನಮ್ಮ ಉಪನ್ಯಾಸಕ ರು ತಪ್ಪು ಮಾಡಿಲ್ಲ. ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು.
-ಚಂದರ್, ವಿದ್ಯಾರ್ಥಿ ಪ್ರಮುಖ.
ಕಾಲೇಜಿನಲ್ಲಿ ನನಗೆ ನಿರಂತರ ಎರಡು ವರ್ಷಗಳಿಂದ ಚಿತ್ರಹಿಂಸೆ ನೀಡ ಲಾಗುತ್ತಿದೆ. ಅದರ ಬಗ್ಗೆ ಅದಮಾರು ಸ್ವಾಮೀಜಿಗೆ ಲಿಖಿತ ದೂರು ನೀಡಿ ದ್ದೇನೆ. ಅದೇ ಸಿಟ್ಟಲ್ಲಿ ನನ್ನ ಮೇಲೆ ಸುಳ್ಳು ಆರೋಪ ಮಾಡಿ ಬಲತ್ಕಾರವಾಗಿ ತಪ್ಪೊಪ್ಪಿಗೆ ಪತ್ರ ಅಥವಾ ರಾಜೀನಾಮೆ ಪತ್ರ ಬರೆಯುವಂತೆ ಹೇಳುತ್ತಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಪ್ರಾಣ ಹೋದರೂ ನಾನು ಸತ್ಯಕ್ಕಾಗಿ ಹೋರಾಟ ನಡೆಸುತ್ತೇನೆ.
-ದುರ್ಗಾಪ್ರಸಾದ್, ಉಪನ್ಯಾಸಕ







