ಹೃದಯ ಸಂಬಂಧಿ ರೋಗಿಗಳಿಗೆ ಅಳವಡಿಸುವ ‘ಸ್ಟೆಂಟ್’ ಉಪಕರಣ ದರ ಇಳಿಕೆ: ಕೇಂದ್ರ ಸಚಿವ ಅನಂತ ಕುಮಾರ್

ಬೆಂಗಳೂರು, ಫೆ.17: ಹೃದಯ ಸಂಬಂಧಿ ರೋಗಿಗಳಿಗೆ ಅಳವಡಿಸುವ ‘ಸ್ಟೆಂಟ್’ ಉಪಕರಣದ ದರವನ್ನು ಕೇಂದ್ರ ಸರಕಾರ ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ, ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ನಗರದ ವಾಡಿಯಾ ಸಭಾಂಗಣದಲ್ಲಿ ‘ಹೃದಯ ಚಿಕಿತ್ಸೆಯ ಸ್ಟೆಂಟ್‌ನ ಐತಿಹಾಸಿಕ ಬೆಲೆ ಇಳಿಕೆ-ಒಂದು ನೋಟ’ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫೆ.13ರಂದು ಮಧ್ಯರಾತ್ರಿಯಿಂದ ಹೊಸ ದರ ಅನ್ವಯವಾಗಲಿದ್ದು, ಸಾಮಾನ್ಯ ಸ್ಟೆಂಟ್ ಉಪಕರಣ (ಮೆಟಲ್ ಸ್ಟೆಂಟ್) ಮಾರುಕಟ್ಟೆಯಲ್ಲಿ 40ರಿಂದ 50 ಸಾವಿರ ರೂ.ಗಳಿಗೆ ಮಾರಾಟವಾಗುತ್ತಿತ್ತು. ಇನ್ನು ಮುಂದು ಇದು 7260 ರೂ.ಗಿಂತ ಹೆಚ್ಚಿಗೆ ಮಾಾಟ ಮಾಡುವಂತಿಲ್ಲ ಎಂದು ತಿಳಿಸಿದರು.
ಅದೇ ರೀತಿ ಗಂಭೀರ ಹೃದಯ ಸಂಬಂಧಿ ರೋಗಿಗಳಿಗೆ ಅಳವಡಿಸುವ ವಿಶೇಷ ಸ್ಟೆಂಟ್‌ಗಳು ಮಾರುಕಟ್ಟೆಯಲ್ಲಿ ಪ್ರಸಕ್ತ 1.70 ಲಕ್ಷ ರೂ.ಗಳಿಗೆ ಮಾರಾಟವಾಗುತ್ತಿದೆ. ಇನ್ನು ಮುಂದೆ ಅದು 29,600 ರೂ.ಗಳಿಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವಂತಿಲ್ಲ. ಇದನ್ನು ಉಲ್ಲಂಘಿಸುವ ಔಷಧ ಮಾರಾಟಗಾರರು ಮತ್ತು ಉತ್ಪಾದಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಕೇಂದ್ರ ಸರಕಾರದ ಈ ನಿರ್ಧಾರದಿಂದ ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ. 2015ರ ಆರೋಗ್ಯ ಇಲಾಖೆಯ ವರದಿ ಪ್ರಕಾರ ದೇಶದಲ್ಲಿ 6.19 ಕೋಟಿ ಜನರು ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದಾರೆ. ಕಳೆದ ವರ್ಷ ದೇಶದಲ್ಲಿ 4 ಲಕ್ಷ ಸ್ಟೆಂಟ್‌ಗಳನ್ನು ರೋಗಿಗಳಿಗೆ ಅಳವಡಿಸಲಾಗಿದೆ. ಈ ವರ್ಷ ಅದು ಐದು ಲಕ್ಷಕ್ಕೆ ಏರುವ ಸಾಧ್ಯತೆ ಇದೆ. ಈ ಸ್ಟೆಂಟ್‌ನ ಉತ್ಪಾದನಾ ವೆಚ್ಚ ಕಡಿಮೆ ಇದ್ದರೂ ಅದನ್ನು ದುಬಾರಿ ವೆಚ್ಚದಲ್ಲಿ ಮಾರಾಟ ಮಾಡಲಾಗುತ್ತಿದೆ. ಆದ್ದರಿಂದ ಕೇಂದ್ರ ಸರಕಾರ ಬೆಲೆ ಇಳಿಸುವ ನಿರ್ಧಾರ ಕೈಗೊಂಡಿದೆ ಎಂದು ಸಚಿವ ಅನಂತಕುಮಾರ್ ತಿಳಿಸಿದರು.
ರಾಷ್ಟ್ರೀಯಯ ಅಗತ್ಯ ಔಷಧಿಗಳ ಸೂಚಿಯಲ್ಲಿ ಇದುವರೆಗೆ ಸ್ಟೆಂಟ್‌ಗಳನ್ನು ಸೇರಿಸಿರಲಿಲ್ಲ. ಇದರಿಂದ ಮಾರಾಟಗಾರರು ಹೆಚ್ಚಿನ ದರದಲ್ಲಿ ಈ ಉಪಕರಣವನ್ನು ಮಾರಾಟ ಮಾಡುತ್ತಿದ್ದರು. ಹೀಗಾಗಿ ಕೇಂದ್ರ ಸರಕಾರ ಈ ಪಟ್ಟಿಗೆ ‘ಸ್ಟೆಂಟ್’ ಉಪಕರಣ ಸೇರಿಸಿ, ಅದರ ಬೆಲೆಯನ್ನು 5 ಪಟ್ಟು ಇಳಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
5000 ಕೋಟಿ ರೂ. ಉಳಿತಾಯ: ಸ್ಟೆಂಟ್ ಉಪಕರಣದ ಬೆಲೆ ಇಳಿಸಿರುವುದರಿಂದ 5000 ಕೋಟಿ ರೂ. ಹಣ ರೋಗಿಗಳಿಗೆ ಉಳಿತಾಯವಾಗಲಿದೆ. ಇನ್ನು ಮುಂದೆ ಹೃದಯಾಲಯಗಳು, ಆಸ್ಪತ್ರೆಗಳು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶೇ.15ರಷ್ಟು ಬಡ್ಡಿಯೊಂದಿಗೆ ದಂಡ ವಸೂಲಿ ಮಾಡಲಾಗುವುದು. ಮಾತ್ರವಲ್ಲ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಕೇಂದ್ರದ ಈ ಐತಿಹಾಸಿಕ ನಿರ್ಧಾರದಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಇದೊಂದು ಕ್ರಾಂತಿಕಾರಕ ಹೆಜ್ಜೆ ಎಂದು ಹೇಳಿದರು. ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದೊರೆಸ್ವಾಮಿ ಮಾತನಾಡಿ, ಪಿಇಎಸ್ ಫಾರ್ಮಸಿಯಲ್ಲಿ ಶೀಘ್ರವೇ ಜೆನರಿಕ್ ಔಷಧಾಲಯ ಸ್ಥಾಪಿಸಿ, ಬಡವರಿಗೆ ಕಡಿಮೆ ದರದಲ್ಲಿ ಔಷಧ ನೀಡಲಾಗುವುದು ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ರವಿಸುಬ್ರಹ್ಮಣ್ಯ, ಮುಖಂಡರಾದ ಸದಾಶಿವ, ಸುಬ್ಬಣ್ಣ ಮತ್ತಿತರರು ಹಾಜರಿದ್ದರು.
ಸ್ಟೆಂಟ್ ಉತ್ಪಾದಕರಿಗೆ ಎಚ್ಚರಿಕೆ
ಕೇಂದ್ರ ಸರಕಾರ ಸ್ಟೆಂಟ್ ಉಪಕರಣದ ಬೆಲೆ ಇಳಿಸಿರುವುದರಿಂದ ಸ್ಟೆಂಟ್ ಉತ್ಪಾದಕರು ಮಾರುಕಟ್ಟೆಯಲ್ಲಿ ಸ್ಟೆಂಟ್ ಉಪಕರಣದ ಅಭಾವವನ್ನು ಸೃಷ್ಟಿಸಬಾರದು. ಈ ಹಿಂದೆ ಉತ್ಪಾದಿಸಿರುವಷ್ಟೇ ಪ್ರಮಾಣದಲ್ಲಿ ಸ್ಟೆಂಟ್ ಉತ್ಪಾದಿಸಬೇಕು ಎಂದು ಸೂಚನೆ ನೀಡಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅನುಮತಿ ರದ್ದು ಮಾಡಲಾಗುವುದು.
-ಅನಂತಕುಮಾರ್, ಕೇಂದ್ರ ರಾಸಾಯನಿಕ ಸಚಿವ







