ಹೆಣ್ಣು ಮಕ್ಕಳ ಕುರಿತ ಸಮಾಜದ ಗ್ರಹಿಕೆಗಳು ಬದಲಾಗಬೇಕು: ಬಿ.ಅಪ್ಪಣ್ಣ ಹೆಗ್ಡೆ
ಭ್ರೂಣಲಿಂಗ ಪತ್ತೆ ತಡೆ ಕುರಿತು ಮಾಹಿತಿ ಶಿಬಿರ

ಸಾಸ್ತಾನ, ಫೆ.17: ಹೆಣ್ಣು ಮಕ್ಕಳ ಮೇಲಿನ ಹಿಂಸೆಯನ್ನು ಕೊನೆಗಾಣಿಸಲು ಕೇವಲ ಕಾನೂನಿಂದ ಮಾತ್ರ ಸಾಧ್ಯವಿಲ್ಲ. ಸಾಮಾಜಿಕವಾಗಿ ಹೆಣ್ಣು ಮಕ್ಕಳ ಕುರಿತಾಗಿ ಇರುವ ಗ್ರಹಿಕೆಗಳು ಮೊದಲು ಬದಲಾಗಬೇಕಿವೆ ಎಂದು ಹಿರಿಯ ಸಹಕಾರಿ ಹಾಗೂ ಬಸ್ರೂರಿನ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಅಭಿಪ್ರಾಯ ಪಟ್ಟಿದ್ದಾರೆ.
ಹಂಗಾರಕಟ್ಟೆ ಬಾಳ್ಕುದ್ರು ಅಭಿವೃದ್ಧಿ ಸಂಸ್ಥೆಯ 7ನೇ ವಾರ್ಷಿಕೋತ್ಸವದ ಪ್ರಯುಕ್ತ ಸಾಸ್ತಾನ ಶಿವಕೃಪಾ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡ ಭ್ರೂಣಲಿಂಗ ಪತ್ತೆ ತಡೆ ಮಾಹಿತಿ ಶಿಬಿರ ಉದ್ಘಾಟಿಸಿ, ಕಲಾಕುಸುಮ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡುತಿದ್ದರು. ಹೆಣ್ಣು ಕೇವಲ ಭೋಗದ ವಸ್ತು ಎಂಬ ಮನೋಭಾವನೆ ಬೆಳೆಸಿಕೊಂಡಿರುವ ಸಮಾಜ ಅದನ್ನು ಆಕೆಯ ಮನಸ್ಸಿನಲ್ಲಿಯೂ ಸಹಜೀಕರಣಗೊಳಿಸಿದೆ.
ಅಲ್ಲದೆ ಆಕೆಯನ್ನು ಅಭದ್ರಗೊಳಿಸುವುದು, ತುಚ್ಛವಾಗಿ ಕಾಣುವುದೇ ಆಗಿದೆ. ಆಕೆಯ ವ್ಯಕ್ತಿತ್ವವನ್ನು ಒಪ್ಪಲು ನಿರಾಕರಿಸುವುದರಿಂದ ನಮ್ಮ ಸಮಾಜದಲ್ಲಿ ಹೆಣ್ಣು- ಗಂಡು ಮಕ್ಕಳಲ್ಲಿ ನಿಯಮ ಬಾಹಿರ ಚಟುವಟಿಕೆಗಳು ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿದ್ಯಾರ್ಥಿ ದೆಸೆಯಲ್ಲಿಯೇ ಅವರಿಗೆ ಈ ಬಗ್ಗೆ ಉಪಯುಕ್ತ ಮಾಹಿತಿ ನೀಡಿದಲ್ಲಿ ಸಾಮಾಜಿಕವಾಗಿ ಅಸಮತೋಲನ ಕಡಿಮೆಯಾಗ ಬಹುದು ಎಂದರು.
ಸಭಾಧ್ಯಕ್ಷತೆಯನ್ನು ಕುಂದಾಪುರ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಕೆ.ಆರ್. ನಾಕ್ ವಹಿಸಿದ್ದರು. ಮುಂಬಯಿ ಉದ್ಯಮಿ ಮೋಹನ್‌ದಾಸ್ ಶೆಟ್ಟಿ, ಉಪ್ರಳ್ಳಿ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ಉಳ್ತೂರು ಮಂಜುನಾಥ ಆಚಾರ್ಯ, ಉದ್ಯಮಿ ಉದಯ್‌ಕುಮಾರ್, ಗುಂಡ್ಮಿಯ ಶಂಕರನಾರಾಯಣ ಅಡಿಗ, ರೋಟರಿ ಮಿಡ್‌ಟೌನ್ ಉಡುಪಿ ಇದರ ಅದ್ಯಕ್ಷ ರಾಮದೇವ್ ಕಾರಂತ್, ಗೀತಾಂಜಲಿ ಆರ್.ನಾಕ್ ಮುಂತಾದವರು ಉಪಸ್ಥಿತರಿದ್ದರು.
ಡಾ.ರಾಮರಾವ್ ಇವರಿಂದ ಭ್ರೂಣಹತ್ಯೆ ತಡೆ ಕಾಯ್ದೆ ಕುರಿತು ಮಾಹಿತಿ ನೀಡಿದರು. ಬಾಳ್ಕುದ್ರು ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರಮೇಶ್ ವಕ್ವಾಡಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಅನಿತಾ ಉಡುಪಿ ಕಾರ್ಯಕ್ರಮ ನಿರೂಪಿಸಿದರು. ಕುಸುಮ ಕಾಮತ್ ವಂದಿಸಿದರು.







