ಕುಡಿತದ ನಶೆಯಲ್ಲಿ ಕತ್ತಿಯಿಂದ ಕಡಿದು ಹಲ್ಲೆ: ಆರೋಪಿ ಪೊಲೀಶ್ ವಶಕ್ಕೆ

ಪುತ್ತೂರು, ಫೆ.17: ಕುಡಿತದ ಮತ್ತಿನಲ್ಲಿ "ಮೊಬೈಲ್" ವಿಚಾರಕ್ಕೆ ಸಂಬಂಧಿಸಿ ನಡೆದ ಜಗಳದ ಪರಿಣಾಮವಾಗಿ ಈರೋಳು ವ್ಯಾಪಾರಿಯೊಬ್ಬ ವ್ಯಕ್ತಿಯೊಬ್ಬರ ತಲೆಗೆ ಕತ್ತಿಯಿಂದ ಕಡಿದು ಹಲ್ಲೆ ನಡೆದ ಘಟನೆ ಪುತ್ತೂರು ನಗರದ ಮುಖ್ಯರಸ್ತೆಯಲ್ಲಿರುವ ಸುಜಾತ ಬಾರ್ ಆ್ಯಂಡ್ ರೆಸ್ಟೋರೆಂಟ್ ಎದುರು ಶುಕ್ರವಾರ ಸಂಜೆ ಸಂಭವಿಸಿದೆ. ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಡಗು ಜಿಲ್ಲೆಯ ಮಡಿಕೇರಿ ಚಟ್ಟಹಳ್ಳಿ ನಿವಾಸಿ, ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಬೆಂಗಳ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿರುವ ನೌಫಲ್ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ ಆರೋಪಿ ಎಂದು ಗುರುತಿಸಲಾಗಿದೆ.
ಕಳೆದ 14 ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ಬಂಗಳ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿದ್ದುಕೊಂಡು ನೌಫಲ್ ಹಲವು ಕಡೆಗಳಲ್ಲಿ ತಾಳೆ ಮರದ ಕಾಯಿ (ಈರೋಳು) ಮಾರಾಟ ಮಾಡುವ ಕಾಯಕ ನಡೆಸುತ್ತಿದ್ದನೆಂದು ತಿಳಿದು ಬಂದಿದೆ.
ಅವರಿಬ್ಬರು ಪರಸ್ಪರ ಪರಿಚಯಸ್ಥರಾಗಿದ್ದು, ಇಬ್ಬರೂ ಕುಡಿತದ ನಶೆಯಲ್ಲಿದ್ದರು. ಈ ವೇಳೆ ಹಲ್ಲೆಗೊಳಗಾದ ವ್ಯಕ್ತಿ ಆರೋಪಿ ನೌಫಲ್‌ನಿಂದ ಮೊಬೈಲ್ ಪಡೆದುಕೊಂಡು ಮಾತನಾಡಿ ಬಳಿಕ ಮೊಬೈಲನ್ನು ತನ್ನ ಪ್ಯಾಂಟ್ ಕಿಸೆಯಲ್ಲಿ ಇರಿಸಿಕೊಂಡಿದ್ದರು. ತನ್ನ ಮೊಬೈಲನ್ನು ನೀಡುವಂತೆ ನೌಫಲ್ ಕೇಳಿಕೊಂಡಿದ್ದರೂ ಆತ ಹಿಂತಿರುಗಿಸದ ಕಾರಣದಿಂದ ಅವರೊಳಗೆ ಜಗಳ ನಡೆದಿತ್ತು ಎನ್ನಲಾಗಿದೆ.
ಈ ವೇಳೆ ನೌಫಲ್ ತನ್ನ ಚೀಲದಲ್ಲಿದ್ದ ಕತ್ತಿಯನ್ನು ತೆಗೆದು ಆತನ ತಲೆಯ ಭಾಗಕ್ಕೆ ಕಡಿದಿರುವುದಾಗಿ ತಿಳಿದು ಬಂದಿದೆ. ತಲೆಯ ಭಾಗಕ್ಕೆ ಕತ್ತಿಯೇಟು ಬಿದ್ದೊಡನೆಯೇ ಆತ ಬಾರ್‌ನೊಳಗೆ ಓಡಿ ಹೋಗಿ ಆರೋಪಿಯ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಸ್ಥಳೀಯರು ಸೇರಿ ಆರೋಪಿಯನ್ನು ಹಿಡಿದು ಆತನನ್ನು ಅಪಾಯದಿಂದ ರಕ್ಷಿಸಿ, ರಕ್ತಸಿಕ್ತಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರೋಪಿಯನ್ನು ಹಿಡಿದಿಟ್ಟಿದ್ದ ಸ್ಥಳೀಯರು ಪುತ್ತೂರು ನಗರ ಪೊಲೀಸರಿಗೆ ಮಾಹಿತಿ ನೀಡಿ, ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರ ಕೈಗೆ ಒಪ್ಪಿಸಿದ್ದಾರೆ. ಪುತ್ತೂರು ನಗರ ಠಾಣೆಯ ಎಸ್‌ಐ ಓಮನಾ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಹಲ್ಲೆಗೊಳಗಾದ ವ್ಯಕ್ತಿ ಕುಡಿತದ ನಶೆಯ ಜೊತೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದರಿಂದ ಆತನ ಮಾಹಿತಿ ಲಭ್ಯವಾಗಿಲ್ಲ. ಹಲ್ಲೆ ನಡೆಸಿದ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ತನಗೆ ಮತ್ತು ಆತನಿಗೆ ಪರಿಚಯವಷ್ಟೇ ಆತನ ಹೆಸರು ಗೊತ್ತಿಲ್ಲ ಎಂದಿರುವುದಾಗಿ ತಿಳಿದು ಬಂದಿದೆ.







