ಉಡುಪಿ: ಬ್ರಹ್ಮಾವರವನ್ನು ತಾಲೂಕು, ಪುರಸಭೆ ಘೋಷಣೆಗೆ ಮನವಿ
ಉಡುಪಿ, ಫೆ.17: ಬ್ರಹ್ಮಾವರದ ಜನತೆಯ ಬಹುಕಾಲದ ಬೇಡಿಕೆ ಹಾಗೂ ನಿರೀಕ್ಷೆಯಾದ ಬ್ರಹ್ಮಾವರ ತಾಲೂಕು ಹಾಗೂ ಆಸುಪಾಸಿನ ಹತ್ತು ಗ್ರಾಮಗಳನ್ನು ಸೇರಿಸಿ ಬ್ರಹ್ಮಾವರ ಪುರಸಭೆ ರಚನೆಯ ಘೋಷಣೆಯನ್ನು ಮಾಡುವಂತೆ ಬ್ಲಾಕ್ ಕಾಂಗ್ರೆಸ್ ಸಮಿತಿ ಬ್ರಹ್ಮಾವರ ನಗರ ಘಟಕ ಸಂಬಂಧಿತ ಸಚಿವರಿಗೆ ಮನವಿ ಅರ್ಪಿಸಿ ಒತ್ತಾಯಿಸಿದೆ ಎಂದು ನಗರ ಘಟಕದ ಅದ್ಯಕ್ಷ ಎಸ್.ರಾಜೇಶ್ ಶೆಟ್ಟಿ ಕುಮ್ರಗೋಡು ಹೇಳಿದ್ದಾರೆ.
ಶುಕ್ರವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜೇಶ್ ಶೆಟ್ಟಿ, ನಗರ ಘಟಕದ ನಿಯೋಗವೊಂದು ಇತ್ತೀಚೆಗೆ ಬೆಂಗಳೂರಿಗೆ ತೆರಳಿ ಸಚಿವ ಪ್ರಮೋದ್ ಮಧ್ವರಾಜ್‌ರ ಶಿಫಾರಸ್ಸಿನೊಂದಿಗೆ ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಅವರಿಗೆ ಈ ಸಂಬಂಧ ಮನವಿಯನ್ನು ಅರ್ಪಿಸಿ ಒತ್ತಾಯಿಸಿದೆ ಎಂದರು. ಅಲ್ಲದೇ ಸಂಬಂಧಿತ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾದ ಪೊನ್ನುರಾಜ್ ಹಾಗೂ ಡಾ.ವಿಶಾಲ್ ಅವರೊಂದಿಗೂ ಮನವಿಗಳನ್ನು ಸಲ್ಲಿಸಲಾಗಿದೆ ಎಂದರು.
ಬ್ರಹ್ಮಾವರ ತಾಲೂಕು ರಚನೆಯ ಬೇಡಿಕೆಗೆ ಹಲವು ದಶಕಗಳ ಇತಿಹಾಸವಿದ್ದು, 1998ರಲ್ಲಿ ಸಿದ್ಧರಾಮಯ್ಯ ಅವರು ಉಪಮುಖ್ಯಮಂತ್ರಿ ಗಳಾಗಿದ್ದ ಸಂದರ್ಭದಲ್ಲೇ ಎಂ.ಬಿ.ಪ್ರಕಾಶ್ ನೇತೃತ್ವದ ಸಮಿತಿಯ ವರದಿ ಆಧಾರದ ಮೇಲೆ ಮೈಸೂರು ಜಿಲ್ಲೆ ಚಾಮರಾಜ ನಗರದ ಹನೂರು ಹಾಗೂ ಆಗಿನ ದ.ಕ.ಜಿಲ್ಲೆಯ ಬ್ರಹ್ಮಾವರಕ್ಕೆ ಉಪತಹಶೀಲ್ದಾರ್‌ರನ್ನು ನೇಮಕ ಮಾಡಿ ತಾಲೂಕು ರಚನೆಗೆ ಚಾಲನೆ ನೀಡಿದ್ದರು ಎಂದವರು ಹೇಳಿದರು.
2002ರಲ್ಲಿ ಬ್ರಹ್ಮಾವರದಲ್ಲಿ ವಿಶೇಷ ತಾಲೂಕು ಕಚೇರಿ ಆರಂಭಗೊಂಡ ಬಳಿಕ ಬೇಡಿಕೆಗೆ ಇನ್ನಷ್ಟು ಒತ್ತು ದೊರಕಿತು. 2013ರ ಬಜೆಟ್ ಭಾಷಣದಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಾಲೂಕು ರಚನೆಯ ಘೋಷಣೆ ಮಾಡಿದ್ದರು ಎಂದು ರಾಜೇಶ್ ಶೆಟ್ಟಿ ವಿವರಿಸಿದರು.
2002ರ ಜನಗಣತಿ ಪ್ರಕಾರ ಬ್ರಹ್ಮಾವರ ತಾಲೂಕು 2 ಹೋಬಳಿ, 70 ಗ್ರಾಮಗಳು, 34 ಗ್ರಾಪಂಗಳನ್ನು ಒಳಗೊಂಡು 21,000 ಜನಸಂಖ್ಯೆಯನ್ನು ಹೊಂದಿ ಅತೀ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕೇಂದ್ರವಾಗಿದೆ. ಇದರ ಭೌಗೋಳಿಕ ವಿಸ್ತೀರ್ಣ 1,28,107 ಎಕರೆಯಾಗಿದೆ. ಈ ಹೋಬಳಿಯಲ್ಲಿ ಪೊಲೀಸ್ ಠಾಣೆ, ವೃತ್ತ ನಿರೀಕ್ಷರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ವಿಶೇಷ ತಹಶೀಲ್ದಾರ್ ಕಚೇರಿ, ಪಟ್ಟಣ ಪಂಚಾಯತ್, ಮೆಸ್ಕಾಂ ಉಪಕೇಂದ್ರ, ಸಬ್‌ರಿಜಿಸ್ಟರ್, ಕೃಷಿ ಕೇಂದ್ರ, ತೋಟಗಾರಿಕೆ, ಅರಣ್ಯ, ಕೃಷಿ, ನಾಡಕಚೇರಿ, ಕಂದಾಯ ನಿರೀಕ್ಷಕರ ಕಚೇರಿ ಸೇರಿದಂತೆ ತಾಲೂಕು ರಚನೆಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿದೆ ಎಂದರು.
ಆದುದರಿಂದ ಈ ಬಾರಿಯ ಬಜೆಟ್‌ನಲ್ಲಿ ಬ್ರಹ್ಮಾವರವನ್ನು ಹೊಸ ತಾಲೂಕಾಗಿ ರಚಿಸುವಂತೆ ಹಾಗೂ ಅದಕ್ಕೆ ಬೇಕಾದ ಅನುದಾನವನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಕಾಗೋಡು ತಿಮ್ಮಪ್ಪರಿಗೆ ಮನವಿ ಮಾಡಲಾಗಿದೆ ಎಂದರು.
ಪುರಸಭೆ: ಬ್ರಹ್ಮಾವರವು ವಾರಂಬಳ್ಳಿ, ಕುಮ್ರಗೋಡು, ಹಂದಾಡಿ, ಮಟಪಾಡಿ, ಚಾಂತಾರು, 52ನೇ ಹೇರೂರು, ಬೈಕಾಡಿ ಹಾಗೂ ಹಾರಾಡಿ ಗ್ರಾಮಗಳನ್ನೊಳಗೊಂಡಿದೆ. ಇದು 1960-70ರಲ್ಲಿ ಟೌನ್ ಪಂಚಾಯತ್ ಆಗಿತ್ತು. ಇಲ್ಲಿ ಪ್ರತಿಷ್ಠಿತ ಶಾಲಾ-ಕಾಲೇಜುಗಳು, ಆಸ್ಪತ್ರೆಗಳು, ಕೈಗಾರಿಕಾ ಘಟಕಗಳೆಲ್ಲವೂ ಇದ್ದು, ಮೂಲಭೂತ ಸೌಕರ್ಯಗಳ ಕೊರತೆಯಿಂದ ಹಿಂದುಳಿಯುವಂತಾಗಿದೆ. ತಾಲೂಕು ರಚನೆಗೆ ಪೂರ್ವಭಾವಿಯಾಗಿ ಇದನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ಸಚಿವ ಖಂಡ್ರೆಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ಆದುದರಿಂದ ಬ್ರಹ್ಮಾವರವನ್ನು ಮಾದರಿ ಪಟ್ಟಣವನ್ನಾಗಿ ಅಭಿವೃದ್ಧಿ ಪಥದತ್ತ ಒಯ್ಯಲು ಕುಮ್ರಗೋಡು, ಹಂದಾಡಿ, ಮಟಪಾಡಿ, ಚಾಂತಾರು, 52ನೇ ಹೇರೂರು, ಬೈಕಾಡಿ, ವಾರಂಬಳ್ಳಿ, ಹಾರಾಡಿ, ನೀಲಾವರ ಹಾಗೂ ಆರೂರು ಗ್ರಾಮಗಳೊಂದಿಗೆ ಒಟ್ಟು 10 ಗ್ರಾಮಗಳನ್ನು ಸೇರಿಸಿ ಬ್ರಹ್ಮಾವರವನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಘಟಕದ ಕಾರ್ಯಾಧ್ಯಕ್ಷ ಹಾಗೂ ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನಿತ್ಯಾನಂದ ಬಿ.ಆರ್., ಪ್ರಧಾನ ಕಾರ್ಯದರ್ಶಿ ದೇವಾನಂದ, ಉಪಾಧ್ಯಕ್ಷ ಆಲ್ತಾಫ್ ಅಹ್ಮದ್, ತಾಜುದ್ದೀನ್ ಇಬ್ರಾಹಿಂ ಉಪಸ್ಥಿತರಿದ್ದರು.







