ಮೊದಲ ಟ್ವೆಂಟಿ-20: ಶ್ರೀಲಂಕಾಕ್ಕೆ ರೋಚಕ ಜಯ
ಮೆಲ್ಬೋರ್ನ್, ಫೆ.17: ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದ ಚಾಮರ ಕಪುಗೆಡೆರಾ ಆಸ್ಟ್ರೇಲಿಯ ವಿರುದ್ಧ ಶ್ರೀಲಂಕಾ ತಂಡಕ್ಕೆ ಮೊದಲ ಟ್ವೆಂಟಿ-20 ಪಂದ್ಯದಲ್ಲಿ 5 ವಿಕೆಟ್‌ಗಳ ಅಂತರದ ರೋಚಕ ಗೆಲುವು ತಂದರು.
ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 168 ರನ್ ಗಳಿಸಿತು. ನಾಯಕ ಫಿಂಚ್(43 ರನ್, 34 ಎಸೆತ, 2 ಬೌಂಡರಿ, 2 ಸಿಕ್ಸರ್) ಸರ್ವಾಧಿಕ ರನ್ ಗಳಿಸಿದರು.
ಫಿಂಚ್ ಅವರು ಮೈಕಲ್ ಕ್ಲಿಂಜರ್‌ರೊಂದಿಗೆ ಮೊದಲ ವಿಕೆಟ್‌ಗೆ 76 ರನ್ ಸೇರಿಸಿದರು. ದೀರ್ಘ ಸಮಯದ ಬಳಿಕ ಕ್ರಿಕೆಟ್ ಆಡಿದ ಲಸಿತ ಮಾಲಿಂಗ(2-29) 2 ವಿಕೆಟ್ ಹಾಗೂ ಎರಡು ಕ್ಯಾಚ್ ಪಡೆದರು.
ಗೆಲ್ಲಲು ಕಠಿಣ ಸವಾಲು ಪಡೆದ ಶ್ರೀಲಂಕಾ ತಂಡ ಅಸೆಲಾ ಗುಣರತ್ನೆ( 52 ರನ್, 37 ಎಸೆತ,7 ಬೌಂಡರಿ) ಸಾಹಸದ ನೆರವಿನಿಂದ ಜಯಭೇರಿ ಬಾರಿಸಿತು. ಗುಣರತ್ನೆ ಅವರು ಮಿಲಿಂದ ಸಿರಿವರ್ಧನರೊಂದಿಗೆ 60 ರನ್ ಸೇರಿಸಿ ಶ್ರೀಲಂಕಾವನ್ನು ಗೆಲುವಿನತ್ತ ಮುನ್ನಡೆಸಿದರು.
ಲಂಕೆಗೆ ಕೊನೆಯ ಎಸೆತದಲ್ಲಿ ಗೆಲುವಿಗೆ 1 ರನ್ ಅಗತ್ಯವಿದ್ದಾಗ ಬೌಂಡರಿ ಬಾರಿಸಿದ ಕಪುಗೆಡರಾ(10) ತಂಡಕ್ಕೆ ರೋಚಕ ಗೆಲುವು ತಂದರು. ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.





