ತಾಹಿರ್ ಸ್ಪಿನ್ ಜಾದೂ, ಹರಿಣ ಪಡೆೆ ಭರ್ಜರಿ ಜಯ
ಏಕೈಕ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯ

ಆಕ್ಲೆಂಡ್, ಫೆ.17: ಲೆಗ್-ಸ್ಪಿನ್ನರ್ ಇಮ್ರಾನ್ ತಾಹಿರ್ ಸ್ಪಿನ್ ಜಾದೂವಿನ ನೆರವಿನಿಂದ ದಕ್ಷಿಣ ಆಫ್ರಿಕ ತಂಡ ಆತಿಥೇಯ ನ್ಯೂಝಿಲೆಂಡ್ ವಿರುದ್ಧದ ಏಕೈಕ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯವನ್ನು 78 ರನ್‌ಗಳ ಅಂತರದಿಂದ ಗೆದ್ದುಕೊಂಡಿದ್ದು, ಈ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಶುಕ್ರವಾರ ಈಡನ್‌ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 185 ರನ್ ಗಳಿಸಿತು. ಆರಂಭಿಕ ಬ್ಯಾಟ್ಸ್‌ಮನ್ ಹಾಶಿಮ್ ಅಮ್ಲ(62 ರನ್, 43 ಎಸೆತ, 9 ಬೌಂಡರಿ, 1 ಸಿಕ್ಸರ್) ಭದ್ರ ಬುನಾದಿ ಹಾಕಿಕೊಟ್ಟರು. ನಾಯಕ ಎಫ್‌ಡು ಪ್ಲೆಸಿಸ್(36), ಎಬಿಡಿವಿಲಿಯರ್ಸ್(26) ಹಾಗೂ ಜೆಪಿ ಡುಮಿನಿ(29) ಎರಡಂಕೆ ಸ್ಕೋರ್ ದಾಖಲಿಸಿದರು.
ಗೆಲ್ಲಲು ಕಠಿಣ ಸವಾಲು ಪಡೆದ ನ್ಯೂಝಿಲೆಂಡ್ ತಂಡ 14.5 ಓವರ್‌ಗಳಲ್ಲಿ ಕೇವಲ 107 ರನ್‌ಗೆ ಆಲೌಟಾಯಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಬ್ರೂಸ್(33) ಸರ್ವಾಧಿಕ ರನ್ ಗಳಿಸಿದರು.
ಏಕದಿನ, ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬೌಲರ್ ಆಗಿರುವ ತಾಹಿರ್ ಶುಕ್ರವಾರ ಈಡನ್‌ಪಾರ್ಕ್‌ನಲ್ಲಿ ಮಾಂತ್ರಿಕ ಸ್ಪಿನ್ ಮೂಲಕ ಕಿವೀಸ್ ದಾಂಡಿಗರನ್ನು ಕಂಗಾಲಾಗಿಸಿದರು. ತಾನೆಸೆದ ಎರಡನೆ ಓವರ್‌ನಲ್ಲಿ 2 ಎಸೆತಗಳಲ್ಲಿ ಎರಡು ವಿಕೆಟ್ ಉಡಾಯಿಸಿದ ತಾಹಿರ್ 3.5 ಓವರ್‌ಗಳಲ್ಲಿ ಜೀವನಶ್ರೇಷ್ಠ ಬೌಲಿಂಗ್(5-24) ಮಾಡಿದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದುಕೊಂಡರು.
ತಾಹಿರ್ ತಾನಾಡಿದ 31ನೆ ಟ್ವೆಂಟಿ-20 ಪಂದ್ಯದಲ್ಲಿ 50 ವಿಕೆಟ್ ಪೂರೈಸಿದರು. ತಾಹಿರ್ ಎರಡನೆ ಅತ್ಯಂತ ವೇಗದಲ್ಲಿ ವಿಕೆಟ್ ಗಳಿಕೆಯಲ್ಲಿ ಅರ್ಧಶತಕ ಪೂರೈಸಿದರು. ಶ್ರೀಲಂಕಾದ ಸ್ಪಿನ್ನರ್ ಅಜಂತಾ ಮೆಂಡಿಸ್(26 ಪಂದ್ಯಗಳು) ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ವೇಗದ ಬೌಲರ್ ಕ್ರಿಸ್ ಮೊರಿಸ್ ಕಿವೀಸ್‌ನ ಅಗ್ರ ಕ್ರಮಾಂಕದ ಆಟಗಾರರಾದ ಫಿಲಿಪ್ಸ್(5) ಹಾಗೂ ಮುನ್ರೊ(0) ವಿಕೆಟ್ ಉಡಾಯಿಸಿ ದಕ್ಷಿಣ ಆಫ್ರಿಕ ವಿಕೆಟ್ ಬೇಟೆಗೆ ಚಾಲನೆ ನೀಡಿದರು. ಮೊದಲ 3 ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ 10 ರನ್ ನೀಡಿ 2 ವಿಕೆಟ್ ಪಡೆದ ಮೊರಿಸ್ 3ನೆ ಓವರ್‌ನ ಮೊದಲ ಹಾಗೂ 2ನೆ ಎಸೆತದಲ್ಲಿ ಸತತ ವಿಕೆಟ್ ಪಡೆದು ಹ್ಯಾಟ್ರಿಕ್ ಹಾದಿಯಲ್ಲಿದ್ದರು. ಆದರೆ, ಕಿವೀಸ್ ಬ್ಯಾಟ್ಸ್‌ಮನ್‌ಗಳು ಅದಕ್ಕೆ ಅವಕಾಶ ನೀಡಲಿಲ್ಲ. ಆ್ಯಂಡಿಲ್ ಫೆಲುಕ್ವಾಯೊ(3-19) ಹಾಗೂ ತಾಹಿರ್ ಕಿವೀಸ್‌ನ ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವಿಕೆಟ್ ಉಡಾಯಿಸಿ ದಕ್ಷಿಣ ಆಫ್ರಿಕ ತಂಡಕ್ಕೆ ಭರ್ಜರಿ ಗೆಲುವು ತಂದರು.
ದಕ್ಷಿಣ ಆಫ್ರಿಕ 185:
ಇದಕ್ಕೆ ಮೊದಲು ಟಾಸ್ ಜಯಿಸಿದ ನ್ಯೂಝಿಲೆಂಡ್ ತಂಡ ದಕ್ಷಿಣ ಆಫ್ರಿಕವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.
ಇನಿಂಗ್ಸ್‌ನ 3ನೆ ಓವರ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್(0) ಶೂನ್ಯಕ್ಕೆ ಔಟಾದರು. ಆಗ ದಕ್ಷಿಣ ಆಫ್ರಿಕ 1 ವಿಕೆಟ್ ನಷ್ಟಕ್ಕೆ 15 ರನ್ ಗಳಿಸಿತ್ತು.
ಅಮ್ಲ(62 ರನ್, 43 ಎಸೆತ, 9 ಬೌಂಡರಿ, 1 ಸಿಕ್ಸರ್) ಹಾಗೂ ಪ್ಲೆಸಿಸ್(36 ರನ್, 25 ಎಸೆತ, 1 ಬೌಂಡರಿ, 3 ಸಿಕ್ಸರ್) 2ನೆ ವಿಕೆಟ್‌ಗೆ 8.3 ಓವರ್‌ಗಳಲ್ಲಿ 87 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು. ತಂಡದ ಮೊತ್ತವನ್ನು 200ರ ಗಡಿ ದಾಟಿಸುವ ಸೂಚನೆ ನೀಡಿದ್ದರು.
ಪ್ಲೆಸಿಸ್ ವಿಕೆಟ್ ಪಡೆದ ಗ್ರಾಂಡ್‌ಹೊಮ್ ಈ ಜೋಡಿಯನ್ನು ಬೇರ್ಪಡಿಸಿದರು. ಮಾತ್ರವಲ್ಲ ಬಿರುಸಿನ ಬ್ಯಾಟಿಂಗ್ ನಡೆಸಿದ ಎಬಿ ಡಿವಿಲಿಯರ್ಸ್(26 ರನ್, 17 ಎಸೆತ, 3 ಬೌಂಡರಿ, 1 ಸಿಕ್ಸರ್) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದಂತೆ ನೋಡಿಕೊಂಡರು.
ಜೆಪಿ ಡುಮಿನಿ ರನೌಟಾಗುವ ಮೊದಲು 16 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್‌ಗಳಿದ್ದ 29 ರನ್ ಗಳಿಸಿದರು.
ನ್ಯೂಝಿಲೆಂಡ್‌ನ ಹೊಸ ಚೆಂಡಿನ ಬೌಲರ್ ಟ್ರೆಂಟ್ ಬೌಲ್ಟ್(2-8) ನಾಲ್ಕು ಓವರ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಸಂಘಟಿಸಿ ಗಮನ ಸೆಳೆದರು. ‘‘ನಾವು ಉತ್ತಮ ಕ್ರಿಕೆಟ್ ಆಡಿದೆವು. ಬೌನ್ಸ್ ಆಗುತ್ತಿದ್ದ ಪಿಚ್‌ನಲ್ಲಿ ನಾವು ಸ್ಥಿರ ಪ್ರದರ್ಶನ ನೀಡಿದೆವು. ನಾವು ನಿಜವಾಗಿಯೂ ಚೆನ್ನಾಗಿ ಆಡಿದೆವು. ಕಳೆದ ಆರೇಳು ತಿಂಗಳಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದೇವೆ’’ ಎಂದು ದಕ್ಷಿಣ ಆಫ್ರಿಕದ ನಾಯಕ ಎಫ್‌ಡು ಪ್ಲೆಸಿಸ್ ತಿಳಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕ: 20 ಓವರ್‌ಗಳಲ್ಲಿ 185/6
(ಹಾಶಿಮ್ ಅಮ್ಲ 62, ಎಫ್‌ಡು ಪ್ಲೆಸಿಸ್ 36, ಜೆಪಿ ಡುಮಿನಿ 29, ಟ್ರೆಂಟ್ ಬೌಲ್ಟ್ 2-8, ಗ್ರಾಂಡ್‌ಹೊಮ್ 2-22)
ನ್ಯೂಝಿಲೆಂಡ್: 14.5 ಓವರ್‌ಗಳಲ್ಲಿ 107 ರನ್‌ಗೆ ಆಲೌಟ್
(ಬ್ರೂಸ್ 33, ಟಿಮ್ ಸೌಥಿ 20, ವಿಲಿಯಮ್ಸನ್ 13, ಇಮ್ರಾನ್ ತಾಹಿರ್ 5-24, ಮೊರಿಸ್ 2-10, ಫೆಲ್ಹುಕ್ವಾಯೊ 3-19)
ಪಂದ್ಯಶ್ರೇಷ್ಠ: ಇಮ್ರಾನ್ ತಾಹಿರ್.







