ನೈತಿಕ ಪೊಲೀಸ್ ಗಿರಿ ವಿರುದ್ಧ ಕಠಿಣ ಕ್ರಮ: ಪಿಣರಾಯಿ ವಿಜಯನ್

ತಿರುವನಂತಪುರಂ,ಫೆ. 18: ನೈತಿಕ ಪೊಲೀಸ್ ಗಿರಿ ( ಮೋರಲ್ ಪೊಲೀಸಿಂಗ್) ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದೇನೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ಇಂತಹ ಚಟವಟಿಕೆಗಳು ಕಂಡು ಬಂದಿವೆ. ಆದ್ದರಿಂದ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಯ ಅಧಿಕೃತ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಇಂತಹ ಕ್ರಿಮಿನಲ್ ಕೃತ್ಯಗಳಿಗೆ ಕೇರಳದಲ್ಲಿ ಅವಕಾಶ ಕೊಡುವುದಿಲ್ಲ. ವಾಲಂಟೈನ್ ದಿನದಲ್ಲಿ ಕರುನಾಗಪ್ಪಳ್ಳಿ ಬೀಚ್‌ಗೆ ಬಂದ ಯುವತಿ,ಯುವಕರಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುವ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಪ್ರಚಾರ ಮಾಡಲಾಗಿದೆ. ಇದರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಿದ್ದೇನೆಂದು ಮುಖ್ಯಮಂತ್ರಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಫೇಸ್‌ಬುಕ್ ಪೋಸ್ಟ್‌ನ ಪೂರ್ಣ ರೂಪ:
ಸದಾಚಾರ ನೈತಿಕ ಪೊಲೀಸ್ ಗಿರಿ( ನೈತಿಕ ಗೂಂಡಾಗಿರಿ) ವಿರುದ್ಧ ಕಠಿಣ ಕ್ರಮ ಸ್ವೀಕರಿಸಲು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ಇಂತಹ ಘಟನೆಗಳು ನಡೆಯುತ್ತಿರುವುದು ಗಮನಕ್ಕೆ ಬಂದಿರುವುದರಿಂದ ಕ್ರಮ ಜರಗಿಸಲಾಗುತ್ತಿದೆ.
ವಾಲಂಟೈನ್ ದಿನದಲ್ಲಿ ಕರುನಾಗಪಳ್ಳಿ ಅಯಿಕ್ಕಲ್ ಬೀಚ್‌ಗೆ ಬಂದ ಯುವಕ ಯುವತಿಯರನ್ನು ದೈಹಿಕ ಹಾಗೂ ಮಾನಸಿಕ ಹಿಂಸೆಗೆ ಗುರಿಪಡಿಸಿ ಅದರ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಇಂಟರ್ನೆಟ್ ಮೂಲಕ ಪ್ರಚಾರ ಮಾಡಿದ ಘಟೆನೆಯಲ್ಲಿ ಸ್ಪಷ್ಟವಾದ ಕಾನೂನು ವ್ಯವಸ್ಥೆಯ ಪ್ರಕಾರ ಕೇಸುದಾಖಲಿಸಲು ಸೂಚಿಸಲಾಗಿದೆ.
ಯುವತಿ ಯುವಕರನ್ನು ನೈತಿಕ ಗೂಂಡಾಗಳು ಆಕ್ರಮಿಸುವುದು, ಆಕ್ರಮಣಕ್ಕೊಳಗಾದವರು ಯಾಚಿಸುತ್ತಿರುವ ದೃಶ್ಯಗಳು ಅವು. ಅಕ್ರಮಿಗಳು ಉಪಯೋಗಿಸಿದ ಮಾತು ,ಭಾಷೆ ಹೆಚ್ಚು ನಿಕೃಷ್ಟ ಮತ್ತು ಸಂಸ್ಕೃತಿ ಹೀನವಾಗಿದೆ. ಯಾವ ಪರಿಸ್ಥಿತಿಯಲ್ಲಿಯೂ ಸಾರ್ವಜನಿಕರ ಮೇಲೆ ಕೈಎತ್ತುವುದಕ್ಕೆ ದಾಳಿ ಮಾಡುವುದಕ್ಕೆ ಯಾರಿಗೂ ಅಧಿಕಾರ ಇಲ್ಲ. ಈ ದೃಶ್ಯಗಳನ್ನು ಇಂಟರ್ನೆಟ್ ಮೂಲಕ ಪ್ರಚಾರ ಮಾಡಿದ್ದು ತೀವ್ರ ಕಾನೂನು ಉಲ್ಲಂಘನೆಯಾಗಿದೆ. ಈ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಕಾನೂನಿನ ಮುಂದೆ ತಂದು ನಿಲ್ಲಿಸಬೇಕೆಂದು ಪ್ರತ್ಯೇಕವಾಗಿ ಸೂಚಿಸಿದ್ದೇನೆ.
ಕೇರಳದ ಕ್ಯಾಂಪಸ್‌ಗಳಲ್ಲಿ, ಪಾರ್ಕ್‌ಗಳಲ್ಲಿ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಮಾತಾಡುವ ಗಂಡು ಮತ್ತು ಹೆಣ್ಣು ಮಕ್ಕಳ ದೃಶ್ಯವನ್ನು ಚಿತ್ರಿಸಿ ನೈತಿಕಾಚಾರ ವಿರುದ್ಧ ಕೃತ್ಯವಾಗಿ ಪ್ರಚಾರ ಮಾಡಿದರೆ ಪರಿಸ್ಥಿತಿ ಹೇಗಾಗಬಹುದು ಎಂದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಇಂತಹ ಕ್ರಿಮಿನಲ್ ಕೃತ್ಯಗಳಿಗೆ ಕೇರಳದಲ್ಲಿ ಅವಕಾಶವಿಲ್ಲ. ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಲಾಗಿದೆ.







