ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಕಡೂರು ಕ್ಷೇತ್ರಕ್ಕೆ 24 ಕೋಟಿ ರೂ. ಅನುದಾನ: ವೈ.ಎಸ್.ವಿ. ದತ್ತ

ಕಡೂರು, ಫೆ.18: ಕಡೂರು ಗ್ರಾಮೀಣ ರಸ್ತೆಗಳ ಸುಧಾರಣೆಯಡಿ ಬೀರೂರು, ಯಗಟಿ, ಸಿಂಗಟಗೆರೆ, ಶ್ಯಾನೆಗೆರೆ, ಬಾಣಾವರ ರಸ್ತೆ ಕಾಮಗಾರಿಗೆ ಅನುದಾನ ಬಂದಿದೆ. ಲೋಕೋಪಯೋಗಿ ಅಪೆಂಡಿಕ್ಸ್-ಇ ಯೋಜನೆಯಲ್ಲಿ 9.80 ಕೋಟಿ ರೂ. ಮಂಜೂರಾಗಿ ಒಟ್ಟಾರೆ 16 ಕಿ.ಮೀ. ರಸ್ತೆ ಕಾಮಗಾರಿಯಾಗಲಿದೆ. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ 24 ಕೋಟಿ ರೂ.ಗಳ ಅನುದಾನ ಮಂಜೂರಾಗಿ ಕಾಮಗಾರಿ ಸದ್ಯದಲ್ಲೇ ಚಾಲನೆಯಾಗಲಿದೆ ಎಂದು ಶಾಸಕ ವೈಎಸ್‌ವಿ ದತ್ತ ತಿಳಿಸಿದರು.
ಅವರು ಕಡೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಶೇ.95 ಮುಗಿದಿದ್ದು, ಅಪೆಂಡಿಕ್-ಇ ಯೋಜನೆಯಡಿ ಒಟ್ಟಾರೆ 18.40 ಕೋಟಿ ರೂ.ಗಳ ಅನುದಾನ ಬಂದಿದೆ. ಜಿಲ್ಲೆಯ ಇತರೆ ಕ್ಷೇತ್ರಗಳಿಗಿಂತ ಹೆಚ್ಚು ಹಣವನ್ನು ಕಡೂರು ಕ್ಷೇತ್ರಕ್ಕೆ ನೀಡಲಾಗಿದೆ. ಅಪೆಂಡಿಕ್-ಇ ಯೋಜನೆಯಡಿ ಜಿಲ್ಲೆಗೆ 64.20 ಕೋಟಿ ರೂ.ಗಳ ಹಣ ಬಂದಿದೆ. ಈ ಅನುದಾನದಲ್ಲಿ ಸಿಂಗಟಗೆರೆ, ಪಂಚನಹಳ್ಳಿ ರಸ್ತೆ ಕಾಮಗಾರಿಗೆ 3.50 ಕೋಟಿ ರೂ ಕೆ.ಎಸ್.ರಸ್ತೆ-ಜಿಗಣೇಹಳ್ಳಿ 1 ಕೋಟಿ ರೂ, ಕಡೂರು-ಎಮ್ಮೆದೊಡ್ಡಿ ರಸ್ತೆಗೆ 1.60 ಕೋಟಿ ರೂ, ಪಂಚನಹಳ್ಳಿ-ತಿಮ್ಮಾಪುರ ರಸ್ತೆಗೆ 2.50 ಕೋಟಿ ರೂ ಬಿಡುಗಡೆಯಾಗಿದೆ ಎಂದು ಹೇಳಿದರು.
ನಂಜುಂಡಪ್ಪ ವರದಿಯ ಪ್ರಕಾರ ಕಡೂರು ತಾಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಇದಕ್ಕಾಗಿ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ. ಮಂಜೂರಾಗಿದೆ. ಇದರಲ್ಲಿ ಬೀರೂರು-ಲಿಂಗದಹಳ್ಳಿ ರಸ್ತೆಗೆ 1 ಕೋಟಿ ರೂ, ಕುಪ್ಪಾಳು-ಸಿದ್ಧರಾಪುರ ರಸ್ತೆಗೆ 1 ಕೋಟಿ ರೂ, ಸರಸ್ವತೀಪುರದಿಂದ ಚಿಕ್ಕಂಗಳ ರಸ್ತೆಗೆ 1 ಕೋಟಿ ರೂ, ಅನುದಾನ ಬಿಡುಗಡೆಯಾಗಿದೆ. 2 ಕೋಟಿ ರೂ.ಗಳಲ್ಲಿ ರಸ್ತೆ ಕಾಮಗಾರಿಗಾಗಿ ರಸ್ತೆಗಳ ಆಯ್ಕೆ ನಡೆಯುತ್ತಿದೆ. ಪ.ಜಾತಿ ಮತ್ತು ಪಂಗಡದ ಕಾಲೋನಿಗಳಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗಳು ಶೇ.95ರಷ್ಟು ಮುಗಿದಿದೆ.
ಪ.ಜಾತಿ ಗಿರಿಜನ ಉಪಯೋಜನೆಯಲ್ಲಿ ಕಡೂರು ಕ್ಷೇತ್ರಕ್ಕೆ 1 ಕೋಟಿ ರೂ. ಬಂದಿದೆ. ಸಾಣೇಹಳ್ಳಿ ಹರಿಜನ ಕಾಲೋನಿಗೆ 8 ಲಕ್ಷ, ಮರವಂಜಿ ಹರಿಜನ ಕಾಲೋನಿಗೆ 8 ಲಕ್ಷ, ಸಿಂಗಟಗೆರೆ ಹರಿಜನ ಕಾಲೋನಿಗೆ 9 ಲಕ್ಷ, ಬಿಳುವಾಲ ಹರಿಜನ ಕಾಲೋನಿಗೆ 15 ಲಕ್ಷ, ಎಮ್ಮೆದೊಡ್ಡಿ ಹರಿಜನ ಕಾಲೋನಿಗೆ 14 ಲಕ್ಷ, ಆಣೇಗೆರೆ ದೇವರಹೊಸಹಳ್ಳಿ ಕಾಲೋನಿಗೆ 10 ಲಕ್ಷ, ಬಾಬಾ ಕಾಲೋನಿಗೆ 7 ಲಕ್ಷ, ತಿಮ್ಮಾಪುರ-ಬಿ. ವಡ್ಡರಹಟ್ಟಿಗೆ 8 ಲಕ್ಷ, ಪಂಚನಹಳ್ಳಿ ಹರಿಜನ ಕಾಲೋನಿ ಮತ್ತು ತಾಂಡ್ಯಾಕ್ಕೆ 21 ಲಕ್ಷ ಈ ಎಲ್ಲಾ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯಲಿದ್ದು, ಒಂದು ತಿಂಗಳಲ್ಲಿ ಕಾಮಗಾರಿಗಳು ಪ್ರಾರಂಭವಾಗಲಿವೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಕೋಡಿಹಳ್ಳಿ ಮಹೇಶ್, ಭಂಡಾರಿ ಶ್ರೀನಿವಾಸ್, ಕೆ.ಎಸ್. ರಮೇಶ್, ಡಿ. ಪ್ರಶಾಂತ್, ಗರುಗದಹಳ್ಳಿ ಕೆಂಚಪ್ಪ, ಯಗಟಿ ತಮ್ಮಯ್ಯ ಮಂಜುನಾಥ್ ಉಪಸ್ಥಿತರಿದ್ದರು.







