ಬಾಲಿವುಡ್ ನಟಿಗೆ ಝಹೀರ್ ಕ್ಲೀನ್‌ಬೌಲ್ಡ್?

ಹೊಸದಿಲ್ಲಿ,ಫೆ.18: ಬಾಲಿವುಡ್ ನಟಿಯರು ಹಾಗೂ ಕ್ರಿಕೆಟಿಗರ ನಡುವೆ ಇತ್ತೀಚೆಗಿನ ದಿನಗಳಲ್ಲಿ ಪ್ರೀತಿ-ಪ್ರೇಮ ಏರ್ಪಡುವುದು ಜಾಸ್ತಿಯಾಗಿದೆ. ನಟಿ ಅನುಷ್ಕಾ ಶರ್ಮರ ಜೊತೆಗಿರುವ ಫೋಟೊವನ್ನು ಪ್ರೇಮಿಗಳ ದಿನದಂದೇ ಟ್ವ್ಟಿಟ್ಟರ್‌ನಲ್ಲಿ ಶೇರ್ ಮಾಡಿರುವ ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ತಾನು ಅನುಷ್ಕಾಳ ಪ್ರೀತಿಯ ಬಲೆಗೆ ಬಿದ್ದಿರುವುದನ್ನು ಕೊನೆಗೂ ಒಪ್ಪಿಕೊಂಡಿದ್ದರು. ಯುವರಾಜ್ ಸಿಂಗ್ ಬ್ರಿಟನ್‌ನ ನಟಿ-ರೂಪದರ್ಶಿ ಹೇಝಲ್ ಕೀಚ್‌ರನ್ನು ವಿವಾಹವಾಗಿದ್ದಾರೆ. ಇದೀಗ ಯುವರಾಜ್‌ರ ಸಹ ಆಟಗಾರ, ದೀರ್ಘಕಾಲದ ಸ್ನೇಹಿತ ಝಹೀರ್ ಖಾನ್ ಬಾಲಿವುಡ್ ನಟಿಯೊಬ್ಬಳಿಗೆ ಕ್ಲೀನ್‌ಬೌಲ್ಡ್ ಆಗಿದ್ದು, ಆಕೆಯನ್ನು ವಿವಾಹವಾಗಲು ಸಜ್ಜಾಗಿದ್ದಾರೆ ಎಂದು ಸ್ನೇಹಿತ ಯುವರಾಜ್ ಸುಳಿವು ನೀಡಿದ್ದಾರೆ.
ಯುವರಾಜ್ ಹಾಗೂ ಝಹೀರ್ 2000ರಲ್ಲಿ ಐಸಿಸಿ ನಾಕೌಟ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟಿಗೆ ಚೊಚ್ಚಲ ಪಂದ್ಯ ಆಡಿದ್ದರು. ಕಳೆದ ಕೆಲವು ವರ್ಷಗಳಿಂದ ಉತ್ತಮ ಸ್ನೇಹ-ಸಂಬಂಧ ಕಾಯ್ದುಕೊಂಡಿದ್ದಾರೆ. ಇದೀಗ ಝಹೀರ್ ಖಾನ್ ಅವರು ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆಗೆ ಕ್ಲೀನ್‌ಬೌಲ್ಡಾಗಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಝಹೀರ್ ಅವರು ಸಾಗರಿಕಾ ಘಾಟ್ಗೆಯೊಂದಿಗೆ ಕಳೆದ ಡಿಸೆಂಬರ್‌ನಲ್ಲಿ ಯುವರಾಜ್ ಮದುವೆಗೆ ಹಾಜರಾಗಿದ್ದರು. ಯುವಿ ವಿವಾಹ ಸಹಿತ ಹಲವು ಕಾರ್ಯಕ್ರಮಗಳಲ್ಲಿ ಈ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಘಾಟ್ಗೆ 2007ರಲ್ಲಿ ತೆರೆದ ಬಂದ ‘ಚೆಕ್ ದೇ ಇಂಡಿಯಾ’ ಚಿತ್ರದಲ್ಲಿ ಹಾಕಿ ಆಟಗಾರ್ತಿಯ ಪಾತ್ರದ ಮೂಲಕ ಸಿನಿಮಾರಂಗಕ್ಕೆ ಭರ್ಜರಿ ಎಂಟ್ರಿಕೊಟ್ಟಿದ್ದರು. ಯುವರಾಜ್-ಕೀಚ್ ವಿವಾಹಕ್ಕೆ ಟ್ವಿಟ್ಟರ್‌ನಲ್ಲಿ ಶುಭಾಶಯ ಕೋರಿದ್ದ ರೋಹಿತ್ ಶರ್ಮ,‘‘ನನ್ನ ಅಣ್ಣ ಯುವರಾಜ್‌ಗೆ ಶುಭಾಶಯಗಳು... ಇದೀಗ ಎಲ್ಲರ ಕಣ್ಣು ಝಹೀರ್ ಖಾನ್ ಮೇಲೆ ನೆಟ್ಟಿದೆ’’ ಎಂದು ಟ್ವೀಟ್ ಮಾಡಿದ್ದರು.
ಸಾಗರಿಕಾ ನಟನೆಯ ಹೊಸ ಚಿತ್ರ ‘‘ಇರಾದಾ’’ ಬಗ್ಗೆ ಝಹೀರ್ ಟ್ವಿಟ್ಟರ್‌ನಲ್ಲಿ ಹಾಡಿ ಹೊಗಳಿದ ಬಳಿಕ ಅವರಿಬ್ಬರ ನಡುವೆ ಪ್ರೀತಿ ಏರ್ಪಟ್ಟಿದೆ ಎಂಬ ಸುದ್ದಿಗೆ ಹೆಚ್ಚು ಪುಷ್ಟಿ ಬಂದಿದೆ. ಈ ಹಿಂದೆ ಝಹೀರ್ ಖಾನ್ ಹೆಸರು ಬಾಲಿವುಡ್ ನಟಿ ಇಶಾ ಶರ್ವಾನಿಯೊಂದಿಗೆ ತಳುಕು ಹಾಕಿಕೊಂಡಿತ್ತು. ಆದರೆ, ಈ ಇಬ್ಬರು ತಮ್ಮ ಸಂಬಂಧವನ್ನು ದೃಢಪಡಿಸಿರಲಿಲ್ಲ.







