'ವಿಶ್ವಾಸ'ಮತ ಗೆದ್ದ ಪಳನಿಸ್ವಾಮಿ
ತಮಿಳುನಾಡಿನಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ

ಚೆನ್ನೈ, ಫೆ.18: ತಮಿಳುನಾಡಿಗೆ ಯಾರು ಮುಖ್ಯಮಂತ್ರಿ ಎಂಬ ಕಳೆದ ಕೆಲವು ದಿನಗಳ ಪ್ರಶ್ನೆಗೆ ಕೊನೆಗೂ ಉತ್ತರ ಲಭಿಸಿದ್ದು, ಬಹುಮತ ಸಾಬೀತಿಗೆ ರಾಜ್ಯಪಾಲರ ಸೂಚನೆಯಂತೆ ಶನಿವಾರ ಇಲ್ಲಿ ನಡೆದ ವಿಶ್ವಾಸ ಮತಯಾಚನೆಯಲ್ಲಿ ಶಶಿಕಲಾ ಪಾಳಯದ ಪಳನಿಸ್ವಾಮಿ ಗೆಲುವು ಸಾಧಿಸಿ ಅಗ್ನಿಪರೀಕ್ಷೆಯನ್ನು ಗೆದ್ದುಕೊಂಡಿದ್ದಾರೆ.
ಡಿಎಂಕೆ ಹಾಗೂ ಪನ್ವೀರ್ ಸೆಲ್ವಂ ಬೆಂಬಲಿಗರ ಕೋಲಾಹಲ, ದಾಂಧಲೆಯ ನಡುವೆ ತಮಿಳುನಾಡಿನ ವಿಧಾನಸಭೆಯಲ್ಲಿ ಸುಮಾರು 29 ವರ್ಷಗಳ ಬಳಿಕ ನಡೆಯುತ್ತಿರುವ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಧ್ವನಿಮತದ ಮೂಲಕ ನಿರ್ಣಯಿಸಲು ಸ್ಪೀಕರ್ ಧನಪಾಲ್ ನಿರ್ಧರಿಸಿದರು.
ಡಿಎಂಕೆ ಸದಸ್ಯರನ್ನು ಹೊರಗಿಟ್ಟು ನಡೆದ ವಿಶ್ವಾಸಮತ ಯಾಚನೆಯಲ್ಲಿ ನಿರೀಕ್ಷೆಯಂತೆ ಪಳನಿಸ್ವಾಮಿ ಜಯ ಸಾಧಿಸಿದ್ದು, ಪಳನಿ ಪರ 122 ಸದಸ್ಯರು ಮತ ಚಲಾಯಿಸಿದರೆ, ವಿರುದ್ಧವಾಗಿ ಕೇವಲ 11 ಮತಗಳು ಚಲಾವಣೆಯಾಗಿದ್ದವು. 8 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಕಲಾಪವನ್ನು ಬಹಿಷ್ಕರಿಸಿತ್ತು. ಪಳನಿ ಅವರು ಪನ್ನೀರ್ ಸೆಲ್ವಂ ವಿರುದ್ಧದ ಹೋರಾಟದಲ್ಲಿ ಭರ್ಜರಿ ಜಯ ಸಾಧಿಸಿದರು.
ಗುಪ್ತ ಮತದಾನದ ಮೂಲಕ ವಿಶ್ವಾಸ ಮತಯಾಚನೆ ನಡೆಸಬೇಕೆಂದು ಪ್ರತಿಪಕ್ಷ ಡಿಎಂಕೆ ಸದಸ್ಯರು ಹಾಗೂ ಪನ್ನೀರ್ ಸೆಲ್ವಂ ಬಣ ಆಗ್ರಹಿಸಿದವು. ಇದಕ್ಕೆ ಸ್ಪೀಕರ್ ಧನಪಾಲ್ ಒಪ್ಪದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಡಿಎಂಕೆ ಸದಸ್ಯರು ಸ್ಪೀಕರ್‌ಗೆ ಮುತ್ತಿಗೆ ಹಾಕಿ ಮೈಕ್‌ನ್ನು ಕಿತ್ತು ಹಾಕಿದ್ದಲ್ಲದೆ, ಸದನದ ಕುರ್ಚಿ, ಟೇಬಲ್, ಮೈಕ್‌ಗಳನ್ನು ಧ್ವಂಸಗೈದು ದಾಂಧಲೆ ನಡೆಸಿದ್ದರು. ಹೀಗಾಗಿ ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತು. ಮಧ್ಯಾಹ್ನ 3ಕ್ಕೆ ಪುನರಾರಂಭಗೊಂಡ ಕಲಾಪದಲ್ಲಿ ಪಳನಿ ವಿಶ್ವಾಸಮತ ಗೆಲ್ಲುವುದರೊಂದಿಗೆ ತನ್ನ ಪಟ್ಟ ಭದ್ರಪಡಿಸಿಕೊಂಡರು.