ಹೃದಯ ಸ್ಟೆಂಟ್‌ಗಳ ಬೆಲೆ ಶೇ.85 ಇಳಿಕೆಗೆ ಕಾರಣ ಈ ಯುವ ವಕೀಲ ಬಿರೇಂದ್ರ ಸಂಗ್ವಾನ್

ಹೊಸದಿಲ್ಲಿ,ಫೆ.18: ಹೃದ್ರೋಗಿಗಳಿಗೆ ಅಳವಡಿಸುವ ಕೊರೊನರಿ ಸ್ಟೆಂಟ್‌ಗಳ ಬೆಲೆಗಳನ್ನು ಶೇ.85ರಷ್ಟು ಕಡಿಮೆಗೊಳಿಸಿ ಕೇಂದ್ರ ಸರಕಾರವು ಆದೇಶವನ್ನು ಹೊರಡಿಸುವ ಮೂಲಕ ರೋಗಿಗಳಿಂದ ದುಬಾರಿ ದರವನ್ನು ವಸೂಲು ಮಾಡಿ ತಮ್ಮ ತಿಜೋರಿ ತುಂಬಿಸುತ್ತಿದ್ದ ಆಸ್ಪತ್ರೆಗಳಿಗೆ ಬುದ್ಧಿ ಕಲಿಸಿದೆ. ಸರಕಾರದ ಈ ನಡೆಯ ಹಿಂದಿದ್ದವರು ಯುವ ವಕೀಲ ಬಿರೇಂದ್ರ ಸಂಗ್ವಾನ್(37).
2014ರ ಅದೊಂದು ದಿನ ಸಂಗ್ವಾನ್ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ತನ್ನ ಸ್ನೇಹಿತನ ಸೋದರನನ್ನು ನೋಡಲು ದಿಲ್ಲಿಯ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದರು. ಅಲ್ಲಿ ರೋಗಿ ಪಕ್ಕದ ಟೇಬಲ್ ಮೇಲಿದ್ದ ಸ್ಟೆಂಟ್‌ನ ಖಾಲಿ ಪ್ಯಾಕೆಟ್ ಅವರ ಕಣ್ಣಿಗೆ ಬಿದ್ದಿತ್ತು. ಸಹಜ ಕುತೂಹಲದಿಂದ ಕೈಗೆತ್ತಿಕೊಂಡು ನೋಡಿದಾಗ ಅದರ ಮೇಲೆ ಮುದ್ರಿತ ಬೆಲೆಯಿರಲಿಲ್ಲ. ಈ ಸ್ಟೆಂಟ್‌ಗೆ ರೋಗಿ 1,26,000 ರೂ.ಪಾವತಿಸಿದ್ದರಾದರೂ ಅದಕ್ಕೆ ಆಸ್ಪತ್ರೆಯು ಬಿಲ್ ನೀಡಿರಲಿಲ್ಲ. ಇದು ತುಂಬ ಹೆಚ್ಚಿನ ಬೆಲೆಯಾಯಿತು ಎಂದುಕೊಂಡ ಸಂಗ್ವಾನ್,ಈ ಬಗ್ಗೆ ಕೆಲವು ಪ್ರಾಥಮಿಕ ಅಧ್ಯಯನ ನಡೆಸಿದ ಬಳಿಕ ಸ್ಟೆಂಟ್‌ಗಳ ದುಬಾರಿ ಬೆಲೆಗಳ ವಿರುದ್ಧ ದೂರಿಕೊಂಡು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದರು.
ಆರೋಗ್ಯ ಕ್ಷೇತ್ರದಲ್ಲಿ ಸ್ಟೆಂಟ್‌ಗಳನ್ನು ಔಷಧಿಯನ್ನಾಗಿ ಅಥವಾ ಲೋಹದ ಕೊಳವೆಯಾಗಿ ಪರಿಗಣಿಸಲಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಸಂಗ್ವಾನ್ ಆರ್‌ಟಿಐ ಕಾಯ್ದೆಯಡಿ ಅರ್ಜಿಯನ್ನೂ ಸಲ್ಲಿಸಿದ್ದರು. ಅಲ್ಲಿಂದ ಬಂದಿದ್ದ ಉತ್ತರ ಅವರನ್ನು ದಂಗು ಬಡಿಸಿತ್ತು. ಸ್ಟೆಂಟ್‌ಗಳಿಗೆ ಕಸ್ಟಮ್ಸ್ ಶುಲ್ಕದಿಂದ ಸಂಪೂರ್ಣ ವಿನಾಯಿತಿ ಇದೆ ಮತ್ತು ಅವುಗಳನ್ನು ಔಷಧಿ ಎಂದು ಪರಿಗಣಿಸಲಾಗಿದ್ದರೂ ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿ(ಎನ್‌ಲ್‌ಇಎಂ)ಯಲ್ಲಿ ಸೇರಿಸಿಲ್ಲವಾದ್ದರಿಂದ ಅದರ ಬೆಲೆಯನ್ನು ನಿಯಂತ್ರಿಸುವ ಯಾವುದೇ ವ್ಯವಸ್ಥೆಯಿಲ್ಲ ಎಂದು ಆರ್‌ಟಿಐ ಉತ್ತರ ಸ್ಪಷ್ಟಪಡಿಸಿತ್ತು.
ಸ್ಟೆಂಟ್‌ಗಳ ಬೆಲೆಗಳ ಮೇಲೆ ನಿಯಂತ್ರಣ ಕೋರಿ ಸಂಗ್ವಾನ್ 2014ರಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. 2016,ಜುಲೈನಲ್ಲಿ ಸರಕಾರವು ಸ್ಟೆಂಟ್‌ನ್ನು ಎನ್‌ಎಲ್‌ಇಎಂನಲ್ಲಿ ಸೇರ್ಪಡೆಗೊಳಿಸಿದಾಗ ಸಂಗ್ವಾನ್ ಅರ್ಧ ವಿಜಯ ಸಾಧಿಸಿದ್ದರು. ಅದಾದ ಆರು ತಿಂಗಳ ಬಳಿಕ ಸರಕಾರವು ಕೊರೊನರಿ ಸ್ಟೆಂಟ್‌ಗಳನ್ನು ಔಷಧಿ ಬೆಲೆಗಳ ನಿಯಂತ್ರಣ ಆದೇಶ,2013ರ ಮೊದಲ ಅನುಸೂಚಿಯಲ್ಲಿ ಸೇರಿಸಿದ ಬಳಿಕ ಅದು ಬೆಲೆ ನಿಯಂತ್ರಣ ವ್ಯವಸ್ಥೆಯಡಿ ಬರುವುದರೊಡನೆ ತನ್ನ ಕಾನೂನು ಹೋರಾಟದಲ್ಲಿ ಪೂರ್ಣ ವಿಜಯ ಗಳಿಸಿದ್ದರು. ಎಲ್ಲ ವಿಧಗಳ ಸ್ಟೆಂಟ್‌ಗಳ ಬೆಲೆಗಳನ್ನು ಶೇ.85ರಷ್ಟು ಕಡಿತಗೊಳಿಸಿ ಸರಕಾರವು ಮಂಗಳವಾರ ಆದೇಶಿಸುವುದರೊಡನೆ ಅಂತಿಮ ಯಶಸ್ಸೂ ಲಭಿಸಿದೆ.
ತಕ್ಷಣವೇ ಜಾರಿಗೆ ಬಂದಿರುವ ಸರಕಾರದ ಆದೇಶದಂತೆ ಸಾಮಾನ್ಯ ಮತ್ತು ವಿಶೇಷ ಸ್ಟೆಂಟಗಳ ಬೆಲೆಗಳನ್ನು ಅನುಕ್ರಮವಾಗಿ 7,623 ರೂ. ಮತ್ತು 31,080 ರೂ.ಗೆ ಇಳಿಸಲಾಗಿದೆ. ಇದು ವ್ಯಾಟ್ ಮತ್ತು ಎಲ್ಲ ಸ್ಥಳೀಯ ತೆರಿಗೆಗಳನ್ನು ಒಳಗೊಂಡಿದೆ. ಇದಕ್ಕೆ ಮುನ್ನ ಹೃದಯ ರೋಗಿಗಳಿಂದ ಸಾಮಾನ್ಯ ಸ್ಟೆಂಟ್‌ಗೆ 45,000 ರೂ.ವರೆಗೆ ಮತ್ತು ವಿಶೇಷ ಸ್ಟೆಂಟ್‌ಗೆ 1.21 ಲ.ರೂ.ವರೆಗೆ ದುಬಾರಿ ಬೆಲೆಗಳನ್ನು ವಸೂಲು ಮಾಡಲಾಗುತ್ತಿತ್ತು.
ಸಂಗ್ವಾನ್ ಅವರ ಯಶಸ್ಸಿಗೆ ಈಗ ಹಲವಾರು ಹಕ್ಕುದಾರರು ಹುಟ್ಟಿಕೊಂಡಿದ್ದಾರೆ. ತನ್ನ ಸರಕಾರವು ಬಡವರ ಬಗ್ಗೆ ಕಾಳಜಿ ವಹಿಸುತ್ತಿದೆ ಮತ್ತು ಸ್ಟೆಂಟ್‌ಗಳ ಬೆಲೆಗಳನ್ನು ತಗ್ಗಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಭೆಯೊಂದರಲ್ಲಿ ಸಭಿಕರಿಗೆ ಹೇಳುತ್ತಿರುವ ಬಗ್ಗೆ ಟ್ವೀಟ್‌ನ್ನೂ ಸಂಗ್ವಾನ್ ತನ್ನನ್ನು ಭೇಟಿಯಾದ ವರದಿಗಾರರಿಗೆ ತೋರಿಸಿದರು. ಈ ಟ್ವೀಟ್ ಮೋದಿಯವರ ಟ್ವಿಟರ್ ಹ್ಯಾಂಡಲ್‌ನಿಂದ ಬಂದಿತ್ತು.
ಆದರೆ ಈ ಬಗ್ಗೆ ಸಂಗ್ವಾನ್ ತಲೆಕೆಡಿಸಿಕೊಂಡಿಲ್ಲ. ಅವರ ಪಾಲಿಗೆ ಇದೊಂದೇ ಯಶಸ್ಸಲ್ಲ, ಇದು ಓರ್ವ ನ್ಯಾಯವಾದಿಯಾಗಿ ಅವರು ಕೈಗೆತ್ತಿಕೊಂಡಿರುವ ವಿಶಾಲ ಸಾಮಾಜಿಕ ಸೇವೆಯ ಭಾಗವಷ್ಟೇ. ಪಿಐಎಲ್ ಮತ್ತು ಆರ್‌ಟಿಐಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಅವರು ದೇಶದಲ್ಲಿಯ ವಿವಿಧ ಸಮಸ್ಯೆಗಳ ಕುರಿತು ನ್ಯಾಯಾಲಯ ಗಳಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಮಂಡಿ ಬದಲಾವಣೆ ಮತ್ತು ಪೃಷ್ಠ ಬದಲಾವಣೆ ಶಸ್ತ್ರಚಿಕಿತ್ಸೆಗಳಲ್ಲಿ ಬಳಸಲಾಗುತ್ತಿರುವ ವಿವಿಧ ಇಂಪ್ಲಾಂಟ್‌ಗಳ ಬೆಲೆ ನಿಯಂತ್ರಣ ತನ್ನ ಮುಂದಿನ ಕಾನೂನು ಸಮರದ ಗುರಿಯಾಗಿದೆ ಎನ್ನುತ್ತಾರೆ ಹರ್ಯಾಣದ ಸೋನಿಪತ್ ಮೂಲದ ಶಿಕ್ಷಕ ದಂಪತಿಯ ಪುತ್ರ ಸಂಗ್ವಾನ್.
courtesy : http://www.scoopwhoop.com