ಕಾಲಿಯಾ ರಫೀಕ್ ಹತ್ಯೆ ಪ್ರಕರಣ: ನಾಲ್ವರು ಆರೋಪಿಗಳು ಪೊಲೀಸರ ಬಲೆಗೆ; ಮುಂದುವರಿದ ತನಿಖೆ

ಉಳ್ಳಾಲ, ಫೆ.18: ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರು ಪೆಟ್ರೋಲ್ ಬಂಕ್ ಬಳಿ ಕಳೆದ ಮಂಗಳವಾರ ಮದ್ಯರಾತ್ರಿ ಬರ್ಬರ ಹತ್ಯೆಗೊಳಗಾದ ಕರ್ನಾಟಕ-ಕೇರಳ ಉಭಯ ರಾಜ್ಯಗಳ ಪಾತಕಿ ಕಾಲಿಯಾ ರಫೀಕನ ಹತ್ಯಾ ಪ್ರಕರಣದ ನಾಲ್ಕು ಜನ ಆರೋಪಿಗಳನ್ನು ಕಾಸರಗೋಡು, ಮಂಗಳೂರಿನ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅಲ್ಲದೆ ಈ ಕೃತ್ಯದಲ್ಲಿ ಇನ್ನೂ ಕೂಡಾ ಕೆಲವು ಆರೋಪಿಗಳು ಕೈ ಜೋಡಿಸಿರುವ ಶಂಕೆಯನ್ನು ವ್ಯಕ್ತಪಡಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿ ಗ್ರಾಮದ ಕಟ್ಪಾಡಿ ರಸ್ತೆಯ ನೂರ್ ಅಲಿ(36), ಮಂಗಲ್ಪಾಡಿ ಗ್ರಾಮ ನಿವಾಸಿ ಅಬ್ದುಲ್ ರವೂಫ್(35), ಮಂಗಲ್ಪಾಡಿ ಗ್ರಾಮದ ಏರೂರು ಹೌಸ್ ನಿವಾಸಿ ಪದ್ದು ಯಾನೆ ಪದ್ಮನಾಭ(25), ಸಾಲೆತ್ತೂರು ನಿವಾಸಿ ರಶೀದ್(32 ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ.
ಕೋಟೆಕಾರ್‌ನ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ರಾತ್ರಿ ಆರೋಪಿಗಳು ಕಾಲಿಯಾ ರಫೀಕ್‌ನ ಕಾರಿಗೆ ಲಾರಿಯಿಂದ ಡಿಕ್ಕಿ ಹೊಡೆದು ಬಳಿಕ ತಲವಾರು ದಾಳಿ, ಪಿಸ್ತೂಲ್‌ನಿಂದ ಶೂಟ್ ಮಾಡಿ ಬರ್ಬರವಾಗಿ ಕೊಲೆಗೈದಿದ್ದರು.
ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ ಮಂಗಳೂರು ಸಿಸಿಬಿ, ಉಳ್ಳಾಲ ಮತ್ತು ಕಾಸರಗೋಡು ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 2 ರಿವಾಲ್ವರ್, 2 ಪಿಸ್ತೂಲ್, ಲವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಮಂಗಳೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.





