ಮಂಗಳೂರು: ಸಹ್ಯಾದ್ರಿ ಕಾಲೇಜಿನಲ್ಲಿ 'ಕೋಡ್ ಕ್ವೆಸ್ಟ್-2017'ಕ್ಕೆ ಚಾಲನೆ
ಮಂಗಳೂರು, ಫೆ.18: ವಿದ್ಯಾರ್ಥಿಗಳು, ವೃತ್ತಿಪರರು ಹಾಗೂ ಸ್ಟಾರ್ಟ್ ಅಪ್ ಆರಂಭಿಸುವವರಿಗೆ ವಿವಿಧ ಸ್ಪರ್ಧೆಗಳನ್ನು ಒಳಗೊಂಡ 'ಕೋಡ್ ಕ್ವೆಸ್ಟ್' ಸ್ಪರ್ಧೆಗೆ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೂನಿಕೋರ್ಟ್‌ನ ಸಹ ಸಂಸ್ಥಾಪಕ ಪ್ರಶಾಂತ್ ಶೆಣೈ ಶನಿವಾರ ಚಾಲನೆ ನೀಡಿದರು.
ಡಿಟಿ ಲ್ಯಾಬ್ಜ್ ಹಾಗೂ ಹೋಸ್ಟ್ ಜೈರೊ ಸಹಯೋಗದಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಯೂನಿಕೋರ್ಟ್ ಟೈಟಲ್ ಸ್ಪೊನ್ಸರ್ಸ್, ರೇಡಿಯೊ ಮಿರ್ಚಿ ಮೀಡಿಯ ಪಾಟ್ನರ್, ಮೊಝಿಲ್ಲ ಮೆಂಟರಿಂಗ್ ಪಾಟ್ನರ್ ಆಗಿ ಕೈ ಜೋಡಿಸಿದ್ದು, ಆ ಮೂಲಕ ಜನರಿಗೆ ಉದ್ಯೋಗ ಒದಗಿಸಲಿದೆ ಎಂದು ಹೋಸ್ಟ್ ಜೈರೊ ಸಂಸ್ಥಾಪಕ ನರೇಶ್ ಭಟ್ ತಿಳಿಸಿದರು.
ವಿವಿಧ ಉದ್ಯಮಗಳಲ್ಲಿ ಕೆಲಸ ಮಾಡುವವರನ್ನು ಭೇಟಿ ಮಾಡಲು ಕೋಡ್ ಕ್ವೆಸ್ಟ್ ಅವಕಾಶ ಕಲ್ಪಿಸಿದೆ. ನೂತನ ತಂತ್ರಜ್ಞಾನದಲ್ಲಿ ಹೊಸದಾಗಿ ಕಂಪೆನಿ ಆರಂಭಿಸುವವರಿಗೆ ಸೂಕ್ತ ಸಲಹೆ ಪಡೆಯಲು ಅನುಕೂಲವಾಗಲಿದೆ. ಮಂಗಳೂರು ಸುತ್ತಮುತ್ತಲಿನ ಐಟಿ ಕಂಪೆನಿಗಳು ಕೋಡ್‌ಕ್ವೆಸ್ಟ್ ನಲ್ಲಿ ಭಾಗವಹಿಸಿದ್ದು, ವಿದ್ಯಾರ್ಥಿಗಳು, ಸ್ಟಾರ್ಟ್ ಅಪ್, ಕಾರ್ಪೊರೇಟ್ ಹಾಗೂ ಹವ್ಯಾಸಿಗಾರರು ತಮ್ಮ ಕೌಶಲ ಪ್ರದರ್ಶಿಸಲು ಅವಕಾಶವಿದೆ ಎಂದು ಹೇಳಿದರು.
ತಾಯಿ ಈಜುಕೊಳದಲ್ಲಿ ತನ್ನ ಮಗುವಿಗೆ ಈಜುವ ತರಬೇತಿಯನ್ನು ನೀಡುವುದು ಹಾಗೂ ಹದ್ದು ತನ್ನ ಆಹಾರವನ್ನು ಕಠಿಣ ಪರಿಶ್ರಮದಿಂದ ಪಡೆಯುವ ಕುರಿತು ಕಿರುಚಿತ್ರಗಳನ್ನು ಈ ಸಂದರ್ಭ ಪ್ರದರ್ಶಿಸಲಾಯಿತು.
ವೇದಿಕೆಯಲ್ಲಿ ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಡಾ. ಯು.ಎಂ. ಭುಶಿ, ಡಿಟಿ ಲ್ಯಾಬ್‌ನ ನಿರ್ದೇಶಕ ಜಾನ್‌ಸನ್ ಟೆಲ್ಲಿಸ್, ಸೆವೆನ್ ಟೆಕ್ನಾಲಜಿಸ್‌ನ ಕೋಡರ್ ಆ್ಯಂಡ್ ಡೆವಲಪರ್ ರಾಜೇಶ್ ಪ್ರಭು, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ರಕ್ಷಿತ್ ಶೆಟ್ಟಿ ಉಪಸ್ಥಿತರಿದ್ದರು.







