ಉಡುಪಿ: ಅನಿಲ ಉಳಿತಾಯದ ಒಲೆ ಲೋಕಾರ್ಪಣೆ

ಉಡುಪಿ, ಫೆ.18: ಉಡುಪಿ ಸುಸಿ ಗ್ಲೋಬಲ್ ರಿಸರ್ಚ್ ಸೆಂಟರ್ ವತಿ ಯಿಂದ ಸಂಶೋಧಿಸಲಾದ ಶೇ.60ರಷ್ಟು ಅನಿಲ (ಗ್ಯಾಸ್) ಉಳಿತಾಯ ಮಾಡುವ ಸುಧಾರಿತ ಒಲೆಯನ್ನು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಶುಕ್ರವಾರ ಲೋಕಾರ್ಪಣೆಗೈದರು.
ಈ ಒಲೆಯನ್ನು ದೇಶದ ಶೇ.50ರಷ್ಟು ಹೊಟೇಲ್‌ಗಳಲ್ಲಿ ಬಳಸಿಕೊಂಡರೆ ಪ್ರತಿವರ್ಷ ಸುಮಾರು 16ಸಾವಿರ ಕೋಟಿ ರೂ.ಗಳಷ್ಟು ಅನಿಲವನ್ನು ದೇಶಕ್ಕೆ ಉಳಿತಾಯ ಮಾಡಬಹುದು. ಈ ಒಲೆಯಲ್ಲಿನ ಬೆಂಕಿ ಎಲ್ಲಿಯೂ ವ್ಯರ್ಥವಾಗುವುದಿಲ್ಲ. ಬೆಂಕಿಯಿಂದ ಹಬೆ (ಸ್ಟೀಮ್) ಉತ್ಪಾದನೆಯಾಗು ವಂತೆ ಮಾಡಿ ಅದರಿಂದ ಅನ್ನ, ಸಾರು, ಸಾಂಬಾರು, ಇಡ್ಲಿ ಬೇಯುವಂತೆ ಮಾಡಬಹುದು. ಇದಕ್ಕೆ ಯಾವುದೇ ಹೆಚ್ಚುವರಿ ಇಂಧನ ಬೇಕಾಗಿಲ್ಲ ಎಂದು ಸುಸಿ ಸೆಂಟರಿನ ಸಂಶೋಧಕ ವಿಜಯ ಕುಮಾರ್ ಹೆಗ್ಡೆ ತಿಳಿಸಿದರು.
ಸರಕಾರ ಈ ಒಲೆಯನ್ನು ಹೊಟೇಲ್ ಉದ್ಯಮಿಗಳು ಬಳಸಿಕೊಳ್ಳಲು ಅನುಕೂಲವಾಗುವಂತೆ ಸಬ್ಸಿಡಿ ಅಥವಾ ಸಾಲ ಒದಗಿಸಬೇಕಾಗಿದೆ. ಇದ ರಿಂದ ದೇಶದಲ್ಲಿ ಗ್ಯಾಸ್ ಉಳಿತಾಯವಾಗಿ ಗ್ಯಾಸನ್ನು ಆಮದು ಮಾಡಿ ಕೊಳ್ಳುವುದು ಕಡಿಮೆ ಮಾಡಬಹುದಾಗಿದೆ ಎಂದು ಅವರು ಹೇಳಿದರು.
ಮನೆಗಳಿಗೆ ಬೇಕಾಗುವ ಗ್ರಾವಿಟೇಶನ್ ಫೋರ್ಸ್ ವಿದ್ಯುತ್, ರೈಲು ಇಂಜಿನ್‌ಗೆ 1/3 ಅಂಶ ಡಿಸೇಲ್ ಉಳಿತಾಯ, ಸ್ವಯಂ ಚಾರ್ಜ್ ಆಗು ವಂತಹ ಬ್ಯಾಟರಿ ಚಾಲಿತ ಕಾರು, ಮೀನುಗಾರಿಕೆಗೆ ಅನುಕೂಲವಾಗು ವಂತಹ ಅಲೆಗಳಿಂದ ಶೀತಲಿ ಘಟಕ, ಡೀಸೆಲ್ ಬೈಕ್ ಸೇರಿದಂತೆ ಹಲವಾರು ಸಂಶೋಧನೆಗಳು ಸದ್ಯದಲ್ಲಿಯೇ ಲೋಕಾರ್ಪಣೆಗೊಳ್ಳಲಿವೆ. ಇದಕ್ಕೆಲ್ಲ ಸರಕಾರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಆಸ್ಕರ್ ಫೆರ್ನಾಂಡಿಸ್ ಮಾತನಾಡಿ, ಇಂದು ಪ್ರಪಂಚದ ಚಿಂತನೆ ಇಂಧನ ವನ್ನು ಉಳಿಸುವುದು. ಆ ದೊಡ್ಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಇಂದಿನ ಅಗತ್ಯ. ಇಂತಹ ಯಾವುದೇ ರೀತಿಯ ಸಂಶೋಧನೆಗೆ ಸರಕಾರ ಬೆಂಬಲ ನೀಡುತ್ತದೆ. ಸಂಶೋಧನೆ ಸಿದ್ಧವಾದರೆ ಅದನ್ನು ಪರಿಶೀಲನೆ ನಡೆ ಸಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎಂ.ಎ.ಗಫೂರ್, ಜಯಕರ ಶೆಟ್ಟಿ ಇಂದ್ರಾಳಿ, ಸುಧಾಕರ್ ಶೆಟ್ಟಿ, ಯಶ್ಪಾಲ್ ಸುವರ್ಣ, ಶೋಭಾ ಕಕ್ಕುಂಜೆ, ಬ್ಲೋಸಂ ಫೆರ್ನಾಂಡಿಸ್, ಸುಪ್ರಸಾದ್ ಶೆಟ್ಟಿ, ದಿನೇಶ್ ಪುತ್ರನ್ ಮೊದಲಾದ ವರು ಉಪಸ್ಥಿತರಿದ್ದರು.







