ಕೊಹ್ಲಿಯ ಭರ್ಜರಿ ಯಶಸ್ಸಿನ ಹಿಂದಿದೆ ಒಂದು ಪುಸ್ತಕ!

ಹೊಸದಿಲ್ಲಿ, ಫೆ.18: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್‌ಕೊಹ್ಲಿ ಇದೀಗ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗಷ್ಟೇ ಅವರು ಸತತ ನಾಲ್ಕು ಟೆಸ್ಟ್ ಸರಣಿಯಲ್ಲಿ ದ್ವಿಶತಕ ಬಾರಿಸಿ ಡೊನಾಲ್ಡ್ ಬ್ರಾಡ್ಮನ್ ಹಾಗೂ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಸ್ ದಾಖಲೆಯನ್ನು ಮುರಿದಿದ್ದರು.
ಇತ್ತೀಚೆಗಿನ ದಿನಗಳಲ್ಲಿ ತನ್ನ ಯಶಸ್ಸಿನ ಅಭಿಯಾನಕ್ಕೆ ಕಾರಣವೇನೆಂಬುದನ್ನು ದಿಲ್ಲಿ ದಾಂಡಿಗ ಕೊಹ್ಲಿ ಶನಿವಾರ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಓರ್ವ ಬ್ಯಾಟ್ಸ್‌ಮನ್ ಹಾಗೂ ಕ್ರಿಕೆಟಿಗನಾಗಿ ಬೆಳೆಯಲು ಪರಮಹಂಸ ಯೋಗಾನಂದ ಬರೆದ ‘ಆಟೋಗ್ರಾಫಿ ಆಫ್ ಯೋಗಿ’’ ಹೆಸರಿನ ಪುಸ್ತಕವೇ ಕಾರಣ ಎಂದು ಕೊಹ್ಲಿ ಹೇಳಿದ್ದಾರೆ.
‘‘ನಾನು ಈ ಪುಸ್ತಕವನ್ನು ತುಂಬಾ ಇಷ್ಟಪಟ್ಟಿರುವೆ. ತಮ್ಮ ಯೋಚನೆ ಹಾಗೂ ಸಿದ್ದಾಂತಗಳನ್ನು ಪ್ರಶ್ನಿಸುವವರು ಈ ಪುಸ್ತಕವನ್ನು ಓದಲೇಬೇಕು. ಈ ಪುಸ್ತಕದಿಂದ ಸಿಗುವ ಜ್ಞಾನವನ್ನು ಅರ್ಥಮಾಡಿಕೊಂಡು, ಬಳಸಿಕೊಂಡರೆ ನಮ್ಮ ಜೀವನದ ದೃಷ್ಟಿಕೋನ ಬದಲಾಗುತ್ತದೆ. ಭಗವಂತನ ಮೇಲೆ ನಂಬಿಕೆ ಇಟ್ಟು ಆ ದಿಕ್ಕಿನಲ್ಲಿ ಹೆಜ್ಜೆ ಇಡಬೇಕು’’ ಎಂದು ಕೊಹ್ಲಿ ವಿನಂತಿಸಿಕೊಂಡಿದ್ದಾರೆ.





