ದಾವಣಗೆರೆ: ಗಮನ ಸೆಳೆದ ಫಲಪುಷ್ಪ ಪ್ರದರ್ಶನ

ದಾವಣಗೆರೆ, ಫೆ.18: ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ವಿವಿಧ ಪುಷ್ಪಗಳಿಂದ ತಯಾರಿಸಲ್ಪಟ್ಟ ಕಲಾಕೃತಿಗಳು ಫಲಪುಷ್ಪ ಪ್ರದರ್ಶನಕ್ಕೆ ಮೆರಗು ತಂದಿವೆ.
ತೋಟಗಾರಿಕೆ ಇಲಾಖೆ, ಜಿಪಂ, ದಾವಣಗೆರೆ ಮತ್ತು ಜಿಲ್ಲಾ ತೋಟಗಾರಿಕೆ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಆಕರ್ಷಣೆಯಾಗಿ 12 ಅಡಿ ಎತ್ತರವಿರುವ ಶಿವ ಲಿಂಗವನ್ನು ಕೆಂಪು, ಬಿಳಿ ಗುಲಾಬಿ, ಚೆಂಡು ಹೂವುಗಳಿಂದ ಅಲಂಕೃತ ಮಾಡಿ ಪ್ರತಿಷ್ಠಾಪಿಸಲಾಗಿದೆ. ಇದಕ್ಕೆ 22 ಸಾವಿರ ಗುಲಾಬಿ, 4 ಸಾವಿರ ಚೆಂಡಿಹೂಗಳ ಬಳಕೆ ಮಾಡಲಾಗಿದೆ.
ಅಲ್ಲದೆ, ಹೂವಿನಿಂದ ಅಲಂಕೃತಗೊಳಿಸಿದ ದ್ವಾರದ ಕಲಾಕೃತಿಗಳು ವಿಶೇಷವಾಗಿ ಮನ ಸೆಳೆಯುತ್ತಿವೆ. ವಿವಿಧ ತರಕಾರಿಗಳಿಂದ ನಿರ್ಮಿಸಿರುವ ಸ್ವಚ್ಛ ಭಾರತ ಅಭಿಯಾನವನ್ನು ಬಿಂಬಿಸುವ ಕಲಾಕೃತಿಗಳು ಆಕರ್ಷಣೀಯವಾಗಿದ್ದು, ಉದ್ಯಾನವನದಲ್ಲಿಯ ವಿವಿಧ ಆಕೃತಿಯ ಟೋಪಿಯರೀಸ್‌ಗಳು ಫಲಪುಷ್ಪ ಪ್ರದರ್ಶನದಲ್ಲಿ ನೋಡುಗರ ಕಣ್ಮನ ಸೆಳೆಯುತ್ತಿವೆ. ಸಂಪೂರ್ಣವಾಗಿ ಬಾಳೆ ದಿಂಡಿನಿಂದ ತಯಾರಿಸಲ್ಪಟ್ಟ ಬಾಳೆ ಮಂಟಪ ಸಹ ಅದ್ಭುತವಾಗಿದೆ.
ಆಕರ್ಷಣೆಯ ಯುದ್ಧವಿಮಾನ:
ಭಾರತ ದೇಶದ ಸೇನೆ, ವಾಯು ಸೇನೆ ಮತ್ತು ನೌಕಾ ಸೇನೆಯ ಪ್ರತೀಕಗಳಾಗಿ ಭಾರತ ನಿರ್ಮಿತ ಯುದ್ಧವಿಮಾನ, ಅಗ್ನಿ ಕ್ಷಿಪಣಿ ಮತ್ತು ಜಲಾಂತರ್ಗಾಮಿಯನ್ನು ವಿವಿಧ ಹೂಗಳಿಂದ ಅಲಂಕರಿಸಿ ಪ್ರದರ್ಶನದ ಪ್ರಮುಖ ಆಕಷರ್ಣೆಯಾಗಿ ಸೃಜಿಸಲಾಗಿದೆ. ಇದರ ಜೊತೆಗೆ ಆಕರ್ಷಣೀಯವಾಗಿ ಅಲಂಕರಿಸಿದ್ದ ವಿವಿಧ ಪ್ರಾಣಿ-ಪಕ್ಷಿ ಅಲಂಕಾರದಲ್ಲಿ ವಯೋಮಾನ ಬೇಧವಿಲ್ಲದೆ ಎಲ್ಲರ ಕಣ್ಮನ ಸೆಳೆಯುತ್ತಿವೆಯಲ್ಲದೆ, ಕೃಷಿ ಉಪಕರಣಗಳ ಪ್ರದರ್ಶನ-ಮಾರಾಟದೊಂದಿಗೆ ರೈತರಿಗೂ ಪ್ರಯೋಜನಕಾರಿಯೆನಿಸಿದೆ.
9 ಕಲಾವಿದರ ಕೈಚಳಕ:
ಒಟ್ಟಾರೆ ಸರಿಸುಮಾರು 3 ಕ್ವಿಂಟಾಲ್ ಚೆಂಡಿ ಹೂ, 30 ಸಾವಿರ ಗುಲಾಬಿ ಹೂ ಸೇರಿದಂತೆ ವಿವಿಧ ಪುಷ್ಪಗಳಿಂದ ತಯಾರಿಸಲ್ಪಟ್ಟ ಕಲಾಕೃತಿಗಳು ಫಲಪುಷ್ಪ ಪ್ರದರ್ಶನಕ್ಕೆ ಮೆರಗು ತಂದಿದ್ದು, ಇವುಗಳನ್ನು ಶಿವಮೊಗ್ಗದ ನ್ಯಾಷನಲ್ ಕಾಲೇಜಿನ ಹರೀಶ್ ಮತ್ತು 8 ಜನರಿರುವ ತಂಡ ಕಳೆದ ಒಂದು ವಾರದಿಂದ ಸಿದ್ಧಪಡಿಸುವ ಕಾರ್ಯ ನಡೆಸಿದ್ದಾರೆ.
ಇದಲ್ಲದೆ, ವಿವಿಧ ಇಲಾಖೆಗಳ ಹಾಗೂ ಸಂಘ ಸಂಸ್ಥೆಗಳ ವಸ್ತು ಪ್ರದರ್ಶನದ ಮಳಿಗೆಗಳನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ವಿವಿಧ ತಾಲೂಕುಗಳ ತೋಟಗಾರಿಕೆ ಬೆಳೆಗಾರರು ಬೆಳೆದ ವಿವಿಧ ಹಣ್ಣು, ತರಕಾರಿ, ಸಾಂಬಾರು ಮತ್ತು ತೋಟದ ಬೆಳೆಗಳ ಉತ್ಪನ್ನಗಳನ್ನು ಪ್ರದರ್ಶಿಸಲಾಗಿದೆ. ತೋಟಗಾರಿಕೆ ಬೆಳೆಗಳ ಪ್ರದರ್ಶನಕ್ಕೆ ವಿವಿಧೆಡೆಯಿಂದ ಪ್ರಗತಿಪರ ರೈತರು ಹಾಗೂ ಸಣ್ಣ, ಅತಿ ಸಣ್ಣ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ತೋಟಗಾರಿಕಾ ಬೆಳೆಗಳು, ತರಕಾರಿಗಳು, ಧಾನ್ಯಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ.
ಈ ಫಲಪುಷ್ಪ ಪ್ರದರ್ಶನ ಮೂರು ದಿನಗಳ ಕಾಲ ನಡೆಯಲಿದ್ದು, ಫೆ. 20ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಏರ್ಪಡಿಸಲಾಗಿದೆ.
ಪ್ರದರ್ಶನದ ಕುರಿತು ಜಿಲ್ಲಾಧಿಕಾರಿ ಡಿ ಎಸ್ ರಮೇಶ್ ಮಾತನಾಡಿ, ಕಸದಿಂದ ರಸ ಮಾಡಬೇಕಾಗಿರುವುದು ಇಂದಿನ ತುರ್ತಾಗಿದೆ. ಪರಿಸರ ಅತ್ಯಂತ ಮಲಿನವಾಗಿರುವ ಇಂದಿನ ಸ್ಥಿತಿಯಲ್ಲಿ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಿ ಪರಿಸರ ಮಾಲಿನ್ಯ ತಡೆಗಟ್ಟುವುದು ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಫಲಪುಷ್ಪ ಪ್ರದರ್ಶನದಲ್ಲಿ ತೆರೆಯಲಾಗಿರುವ ಕಸದಿಂದ ರಸ ಅಭಿಯಾನ ಮತ್ತು ಅನೇಕ ಪರಿಸರ ಸ್ನೇಹಿ ಚಟುವಟಿಕೆಗಳು ಶ್ಲಾಘನೀಯ ಮತ್ತು ಅನುಕರಣೀಯ ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ್ ಮಾತನಾಡಿ ನಗರವನ್ನು ಹಸರೀಕರಣಗೊಳಿಸುವುದು ಅತಿ ಮುಖ್ಯವಾಗಿದ್ದು, ನಮ್ಮೆಲ್ಲರ ಜವಾಬ್ದಾರಿ ಕೂಡ ಆಗಿದೆ. ನಾವೆಲ್ಲ ಮನೆ ಮುಂದೆ ಗಿಡ, ತಾರಸಿ ಗಾರ್ಡನಿಂಗ್‌ಗಳಂತಹ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕೆಂದರು.
ಪಂಚಾಯತ್ ಅಧ್ಯಕ್ಷೆ ಉಮಾ ಎಂ.ಪಿ. ರಮೇಶ್, ಉಪಾಧ್ಯಕ್ಷ ಡಿ. ಸಿದ್ದಪ್ಪ, ಮಹಾನಗರ ಪಾಲಿಕೆ ಮಹಾಪೌರರಾದ ರೇಖಾ ನಾಗರಾಜ್, ಜಿ.ಪಂ. ಸದಸ್ಯರು, ಪಾಲಿಕೆ ಸದಸ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು, ಶಾಲಾ ಮಕ್ಕಳು ಶಿವ ಲಿಂಗಕ್ಕೆ ಪುಷ್ಪ ಅರ್ಪಿಸಿದರು.







