ಮಂಗಳೂರು: ಕರಾವಳಿ ಸೌಹಾರ್ದ ರ‍್ಯಾಲಿ ಸಮಾವೇಶಕ್ಕೆ ಕೇರಳದ ಸಿಎಂ. ಪಿಣರಾಯಿ ವಿಜಯನ್

ಮಂಗಳೂರು,ಫೆ.18:ನಗರದಲ್ಲಿ ಫೆ.25ರಂದು ನಡೆಯಲಿರುವ ಕರಾವಳಿ ಸೌಹಾರ್ದ ರ‍್ಯಾಲಿ ಹಾಗೂ ಬಹಿರಂಗ ಸಭೆಗೆ ಕೇರಳ ರಾಜ್ಯದ ಮುಖ್ಯ ಮಂತ್ರಿ ಹಾಗೂ ಸಿಪಿಐ(ಎಂ)ನ ಪಾಲಿಟ್ ಬ್ಯೂರೋ ಸದಸ್ಯ ಪಿಣರಾಯಿ ವಿಜಯನ್ ಭಾಗವಹಿಸಲಿದ್ದಾರೆ ಎಂದು ಸಿಪಿಐ(ಎಂ) ಕಾರ್ಯದರ್ಶಿ ವಸಂತ ಆಚಾರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕರಾವಳಿಯಲ್ಲಿ ಸ್ವಾತಂತ್ರ ಪೂರ್ವದಿಂದಲೂ ಇದ್ದ ಸೌಹಾರ್ದ ಪರಂಪರೆಗೆ ಧಕ್ಕೆ ಯಾಗುವ ರೀತಿಯಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಇಲ್ಲಿನ ಕೋಮುವಾದಿ ಶಕ್ತಿಗಳು ಧರ್ಮ ಧರ್ಮಗಳ ಜನರ ನಡುವೆ ಅಪನಂಬಿಕೆಯನ್ನು ಸೃಷ್ಟಿ ಮಾಡುತ್ತಾ ಮತೀಯ ಸಾಮರಸ್ಯವನ್ನು ಕದಡುವ ಕೆಲಸದಲ್ಲಿ ತೊಡಗಿದ್ದಾರೆ.ಈ ಹಿನ್ನೆಲೆಯಲ್ಲಿ ಜನತೆಯ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಈ ರ‍್ಯಾಲಿಯನ್ನು ಸಂಘಟಿಸಲಾಗಿದೆ.
ಫೆ.25ರಂದು ಸಂಜೆ ನಗರದ ಜ್ಯೋತಿ ಅಂಬೇಡ್ಕರ್ ವೃತ್ತದಿಂದ ಅಪರಾಹ್ನ 2:30ಕ್ಕೆರ‍್ಯಾಲಿ ಆರಂಭಗೊಂಡು ನೆಹರೂ ಮೈದಾನದಲ್ಲಿ 3:30ಗಂಟೆಗೆ ಬಹಿರಂಗ ಸಭೆ ನಡೆಯಲಿದೆ.
ಕೇರಳ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿದ್ಯಾರ್ಥಿ ಚಳವಳಿಯ ಮೂಲಕ ಎಡಚಳವಳಿಯಲ್ಲಿ ಆಕರ್ಷಿತರಾಗಿ ಕೋಮುವಾದದ ವಿರುದ್ಧ ಯಾವೂದೇ ರಾಜಿ ಮಾಡಿಕೊಳ್ಳದೆ ಹೋರಾಟ ಮಾಡಿರುವ ಅವರು ಪಕ್ಷದ ಕೇರಳ ರಾಜ್ಯದ ಕಾರ್ಯದರ್ಶಿಯಾಗಿ ,ವಿಧಾನ ಸಭೆಯಲ್ಲಿ ಶಾಸಕ,ಸಚಿವರಾಗಿ ಜನಸಾಮಾನ್ಯರ ಪರ ಉತ್ತಮ ಬಜೆಟ್ ಮಂಡಿಸುವ ಮುಖಾಂತರ ಕೇರಳ ರಾಜ್ಯದ ಜನಮೆಚ್ಚಿದ ನಾಯಕರಾಗಿದ್ದಾರೆ.
ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಮಾಜಿ ಶಾಸಕರು ಪಕ್ಷದ ರಾಜ್ಯ ಕಾರ್ಯದರ್ಶಿಗಳು ಆದ ಜಿ.ವಿ.ಶ್ರೀರಾಮ ರೆಡ್ಡಿ ,ಪಕ್ಷದ ಹಿರಿಯ ಮುಂದಾಳು ಕೆ.ಆರ್.ಶ್ರೀಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ.ಪಕ್ಷದ ಕಾರ್ಯದರ್ಶಿ ಮಂಡಳಿಯ ಸದಸ್ಯರಾದ ಕೆ.ಶಂಕರ್,ಜೆ.ಬಾಲಕೃಷ್ಣ ಶೆಟ್ಟಿ,ಹಾಗೂ ಸಿಪಿಐ ಯ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಸಂತ ಆಚಾರಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಕೆ.ಆರ್.ಶ್ರೀಯಾನ್,ಬಾಲಕೃಷ್ಣ ಶೆಟ್ಟಿ,ಕೆ.ಯಾದವ ಶೆಟ್ಟಿ,ಸುನಿಲ್ ಕುಮಾರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.







