ಮಾಧ್ಯಮ ಅಮೆರಿಕದ ಜನರ ಶತ್ರು: ಟ್ರಂಪ್

ವಾಶಿಂಗ್ಟನ್, ಫೆ. 18: ತನ್ನ ಆಡಳಿತವನ್ನು ಟೀಕಿಸುತ್ತಿರುವ ಪತ್ರಿಕೆಗಳು ಮತ್ತು ಚಾನೆಲ್‌ಗಳ ವಿರುದ್ಧದ ದಾಳಿಯನ್ನು ಹೆಚ್ಚಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾಧ್ಯಮವು ಅಮೆರಿಕದ ಜನರ ಶತ್ರುವಾಗಿದೆ ಎಂದು ಹೇಳಿದ್ದಾರೆ.
‘‘ಸುಳ್ಳು ಸುದ್ದಿಯ ಮಾಧ್ಯಮಗಳಾದ ನ್ಯೂಯಾರ್ಕ್ ಟೈಮ್ಸ್, ಎನ್‌ಬಿಸಿ ನ್ಯೂಸ್, ಎಬಿಸಿ, ಸಿಬಿಎಸ್, ಸಿಎನ್‌ಎನ್‌ಗಳು ನನ್ನ ಶತ್ರುಗಳಲ್ಲ, ಅವುಗಳು ಅಮೆರಿಕದ ಜನರ ಶತ್ರುಗಳು!’’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ತನ್ನ ಆಡಳಿತವು ‘ಸುಸಜ್ಜಿತ ಯಂತ್ರದಂತೆ ನಡೆಯುತ್ತಿದೆ’ ಹಾಗೂ ‘ಅಪ್ರಾಮಾಣಿಕ’ ಮಾಧ್ಯಮಗಳು ವರದಿ ಮಾಡುತ್ತಿರುವಂತೆ ಶ್ವೇತಭವನದ ಒಳಗೆ ‘ಯಾವುದೇ ಗೊಂದಲ’ಗಳಿಲ್ಲ ಎಂದು ಹೇಳಿದ ಒಂದು ದಿನದ ಬಳಿಕ ಟ್ರಂಪ್ ಮಾಧ್ಯಮದ ವಿರುದ್ಧ ಹೊಸ ದಾಳಿ ನಡೆಸಿದರು.
ತನ್ನ ಶ್ವೇತಭವನ ಅವ್ಯವಸ್ಥೆಯಲ್ಲಿದೆ ಎಂದು ಹೇಳುವ ವರದಿಗಳನ್ನು ನೋಡುವುದಕ್ಕಾಗಿ ಪತ್ರಿಕೆಗಳನ್ನು ಎತ್ತಿಕೊಳ್ಳುವುದು ಮತ್ತು ಟಿವಿ ಹಾಕುವುದು ತನಗೆ ಆಗದ ಕೆಲಸ ಎಂದು 70 ವರ್ಷದ ರಿಯಲ್ ಎಸ್ಟೇಟ್ ಕುಳ ಹೇಳಿದರು.
ಜನವರಿ 20ರಂದು ತಾನು ಅಮೆರಿಕದ ಅಧ್ಯಕ್ಷನಾಗಿ ಅಧಿಕಾರಕ್ಕೆ ಏರಿದ ಬಳಿಕ ತನ್ನ ಆಡಳಿತ ಮತ್ತು ನಿರ್ವಹಣೆ ಬಗ್ಗೆ ತುಂಬಾ ಮಂದಿ ತೃಪ್ತಿ ಹೊಂದಿದ್ದಾರೆ ಎಂದರು.
ತನ್ನ ನಿಲುವುಗಳನ್ನು ವ್ಯಕ್ತಪಡಿಸಲು ಹಾಗೂ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡಲು ಟ್ರಂಪ್ ಟ್ವಿಟರ್ ಮತ್ತು ಫೇಸ್‌ಬುಕ್‌ಗಳನ್ನು ಯಥೇಚ್ಛವಾಗಿ ಬಳಸುತ್ತಿದ್ದಾರೆ.







