ಶೌಚಾಲಯದಲ್ಲೇ ಅಡುಗೆ ಮನೆ ! : ಮಧ್ಯ ಪ್ರದೇಶದ ಗ್ರಾಮದಲ್ಲಿ ಸ್ವಚ್ಛ ಭಾರತದ ಅಣಕ

ಇಂಧೋರ್: ಈ ಅಡುಗೆ ಮನೆ ನೋಡಿದರೆ ಅಲ್ಲಿ ಮಾಡಿದ ಪ್ರತಿಯೊಂದು ಪದಾರ್ಥ ಸೇವಿಸುವುದನ್ನು ನೀವು ಖಂಡಿತಾ ಬಿಡುತ್ತೀರಿ. ಏಕೆ ಗೊತ್ತೇ? ಮಧ್ಯಪ್ರದೇಶದ ಚಾತಾಪುರ ಜಿಲ್ಲೆಯಲ್ಲಿ ಶೌಚಾಲಯವೊಂದನ್ನು ಅಡುಗೆಮನೆಯಾಗಿ ಪರಿವರ್ತಿಸಲಾಗಿದೆ. ಅಂತೆಯೇ ಮತ್ತೊಂದು ಶೌಚಾಲಯವನ್ನು ಕಿರಾಣಿ ಅಂಗಡಿಯಾಗಿ ರೂಪಿಸಲಾಗಿದೆ. ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ವಚ್ಛಭಾರತ ಯೋಜನೆಯ ಅಣಕವಾಗಿದ್ದು, ಯೋಜನೆಯಲ್ಲಿ ನಡೆದಿರುವ ಭಾರಿ ಅವ್ಯವಹಾರಕ್ಕೆ ಕನ್ನಡಿಯೂ ಆಗಿದೆ.
ಜಿಲ್ಲೆಯ ಕೊಡಾನ್ ಗ್ರಾಮದ ದಿನೇಶ್ ಯಾದವ್ ಅವರು ತಮ್ಮ ಶೌಚಾಲಯವನ್ನು ಅಡುಗೆಮನೆಯಾಗಿ ಪರಿವರ್ತಿಸಿದ್ದಾರೆ. ಏಕೆಂದರೆ ಸೆಪ್ಟಿಂಗ್ ಟ್ಯಾಂಕ್ ಇಲ್ಲದೇ ಈ ಶೌಚಾಲಯ ನಿರ್ಮಿಸಲಾಗಿತ್ತು. ಅವರ ಫಲಾನುಭವಿ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ್ದರೂ, ಆ ಗ್ರಾಮದ ಸರಪಂಚರು ಶೌಚಾಲಯ ನಿರ್ಮಿಸಿದ್ದಾರೆ ಎಂದು ಅವರ ಪತ್ನಿ ಸುಶೀಲಾ ಸುದ್ದಿಗಾರರಿಗೆ ತಿಳಿಸಿದರು.
"ನಮ್ಮ ಶೌಚಾಲಯವನ್ನು ಕೂಡಾ ಅವರೇ ನಿರ್ಮಿಸುತ್ತಿದ್ದಾರೆ. ನಮ್ಮ ಖಾತೆಗೆ ಬಂದ ಹಣವನ್ನು ನಾವು ಅವರಿಗೆ ನೀಡಿದ್ದೇವೆ. ಆದರೆ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ನಾವು ಈಗಲೂ ಶೌಚಕ್ಕೆ ಬಯಲನ್ನೇ ಅವಲಂಬಿಸಬೇಕಿದೆ " ಎಂದು ಅವರು ಹೇಳುತ್ತಾರೆ.
ಚತಾಪುರ ಪಟ್ಟಣದ ದೇರಿ ರಸ್ತೆಯಲ್ಲಿ ಕೂಲಿಕಾರ್ಮಿಕ ಲಕ್ಷ್ಮಣ್ ಖುಷ್ವಾಹ ತಮ್ಮ ಶೌಚಾಲಯವನ್ನು ಕಿರಾಣಿ ಅಂಗಡಿಯಾಗಿ ಮಾರ್ಪಡಿಸಿದ್ದಾರೆ. ಇಲ್ಲೂ ಸೆಪ್ಟಿಕ್ ಟ್ಯಾಂಕ್ ನಿರ್ಮಿಸದ ಕಾರಣ ಶೌಚಾಲಯ ಬಳಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಪರಿವರ್ತಿಸಿದ್ದಾಗಿ ಮೂಲಗಳು ಹೇಳಿವೆ.
"ಈ ಲೋಪದ ಬಗ್ಗೆ ನಾವು ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಯಾರೂ ಕಿವಿಗೆ ಹಾಕಿಕೊಂಡಿಲ್ಲ. ಆದ್ದರಿಂದ ತಂದೆ ಶೌಚಾಲಯ ಕಟ್ಟಡದಲ್ಲಿ ಕಿರಾಣಿ ಅಂಗಡಿ ತೆರೆದಿದ್ದಾರೆ. ಆರು ತಿಂಗಳ ಹಿಂದೆ ಇದು ನಿರ್ಮಾಣವಾಗಿದ್ದರೂ, ಶೌಚಕ್ಕೆ ಬಯಲನ್ನೇ ಅವಲಂಬಿಸಬೇಕಾಗಿದೆ" ಎಂದು ಲಕ್ಷ್ಮಣ್ ಅವರ 17 ವರ್ಷದ ಪುತ್ರಿ ಹೇಳುತ್ತಾರೆ.
ಈ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಗಮನ ಸೆಳೆದಾಗ ಈ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.