ಹಿಂದೂ ವಿವಾಹ ಮಸೂದೆಗೆ ಪಾಕ್ ಸೆನೆಟ್ ಅನುಮೋದನೆ
ಅಧ್ಯಕ್ಷರ ಸಹಿಯ ಬಳಿಕ ಕಾನೂನಾಗಿ ಶೀಘ್ರವೇ ಜಾರಿ

ಇಸ್ಲಾಮಾಬಾದ್, ಫೆ. 18: ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂಗಳ ಮದುವೆಗಳನ್ನು ನಿಯಂತ್ರಿಸುವ ಮಹತ್ವದ ಮಸೂದೆಯನ್ನು ಸೆನೆಟ್ ಅವಿರೋಧವಾಗಿ ಅಂಗೀಕರಿಸಿದ್ದು, ಅದು ಇನ್ನು ಕಾನೂನು ಆಗಲಿದೆ.
ಹಿಂದೂ ವಿವಾಹ ಮಸೂದೆ 2017 ಹಿಂದೂ ಸಮುದಾಯದ ವಿಸ್ತೃತ ವೈಯಕ್ತಿಕ ಕಾನೂನು ಆಗಿದ್ದು, ಶುಕ್ರವಾರ ಅದನ್ನು ಸೆನೆಟ್ ಅಂಗೀಕರಿಸಿದೆ.
ಮಸೂದೆಯನ್ನು ಕೆಳಮನೆ ನ್ಯಾಶನಲ್ ಅಸೆಂಬ್ಲಿ ಈಗಾಗಲೇ 2015 ಸೆಪ್ಟಂಬರ್ 26ರಂದು ಅಂಗೀಕರಿಸಿದೆ. ಇನ್ನು ಅದು ಕಾನೂನು ಆಗಲು ದೇಶದ ಅಧ್ಯಕ್ಷರ ಸಹಿ ಮಾತ್ರ ಬಾಕಿಯಿದೆ.ಮಸೂದೆಯು ವಿವಾಹ, ವಿವಾಹ ನೋಂದಣಿ, ವಿಚ್ಛೇದನೆ ಮತ್ತು ಮರುಮದುವೆಗಳಿಗೆ ಸಂಬಂಧಿಸಿದೆ ಹಾಗೂ ಮದುವೆಯ ಕನಿಷ್ಠ ವಯಸ್ಸನ್ನು ಅದು ಹುಡುಗ ಮತ್ತು ಹುಡುಗಿ ಇಬ್ಬರಿಗೂ 18 ವರ್ಷಕ್ಕೆ ನಿಗದಿಪಡಿಸಿದೆ.
ಮಸೂದೆಗೆ ಪಾಕಿಸ್ತಾನದಲ್ಲಿ ವಾಸಿಸುವ ಹಿಂದೂಗಳ ವ್ಯಾಪಕ ಬೆಂಬಲವಿದೆ ಎಂದು ‘ಡಾನ್ ನ್ಯೂಸ್’ ವರದಿ ಮಾಡಿದೆ.ಹಿಂದೂ ಮಹಿಳೆಯರು ತಮ್ಮ ಮದುವೆಯ ದಾಖಲೀಕೃತ ಪುರಾವೆಯನ್ನು ಪಡೆಯಲು ಈ ಮಸೂದೆಯಿಂದ ಸಾಧ್ಯವಾಗಲಿದೆ.
ಮಸೂದೆಯು ಪಂಜಾಬ್, ಬಲೂಚಿಸ್ತಾನ ಮತ್ತು ಖೈಬರ್ ಪಖ್ತೂಂಖ್ವ ಪ್ರಾಂತಗಳಲ್ಲಿ ಜಾರಿಗೆ ಬರಲಿದೆ. ಸಿಂಧ್ ಪ್ರಾಂತವು ಈಗಾಗಲೇ ತನ್ನದೇ ಆದ ಹಿಂದೂ ಮದುವೆ ಕಾನೂನನ್ನು ಹೊಂದಿದೆ.
ಕಾನೂನು ಸಚಿವ ಝಾಹಿದ್ ಹಮೀದ್ ಸೆನೆಟ್‌ನಲ್ಲಿ ಮಂಡಿಸಿದ ಮಸೂದೆಗೆ ಯಾರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ.
ಮಾನವಹಕ್ಕುಗಳ ಕುರಿತ ಸೆನೆಟ್ ಕ್ರಿಯಾ ಸಮಿತಿಯು ಮಸೂದೆಯನ್ನು ಜನವರಿ 2ರಂದು ಭಾರೀ ಬಹುಮತದೊಂದಿಗೆ ಅಂಗೀಕರಿಸಿತ್ತು.ಆಡಳಿತಾರೂಢ ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಝ್ ಪಕ್ಷದ ಮಹತ್ವದ ಹಿಂದೂ ಸಂಸದ ರಮೇಶ್ ಕುಮಾರ್ ವಂಕ್ವಾನಿ, ದೇಶದಲ್ಲಿ ಹಿಂದೂ ವಿವಾಹ ಕಾನೂನೊಂದನ್ನು ಜಾರಿಗೆ ತರಲು ಮೂರು ವರ್ಷಗಳಿಂದ ನಿರಂತರವಾಗಿ ಶ್ರಮಿಸಿದ್ದಾರೆ.







