ಪೂರ್ವ ವಲಯಕ್ಕೆ ಒಲಿದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ
ಮನೋಜ್ ತಿವಾರಿ ಬಳಗಕ್ಕೆ ಸತತ ನಾಲ್ಕನೆ ಜಯ

ಮುಂಬೈ,ಫೆ.18: ಅಂತರ್-ವಲಯ ಟೂರ್ನಮೆಂಟ್‌ನ ಅಂತಿಮ ದಿನವಾದ ಶನಿವಾರ ಪಶ್ಚಿಮ ವಲಯ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿದ ಪೂರ್ವ ವಲಯ ಸತತ ನಾಲ್ಕನೆ ಗೆಲುವಿನೊಂದಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಗೆಲುವಿಗೆ 150 ರನ್ ಗುರಿ ಪಡೆದಿದ್ದ ಪೂರ್ವ ವಲಯ ವಿರಾಟ್ ಸಿಂಗ್(ಅಜೇಯ 58 ರನ್, 34 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ಇಶಾಂಕ್ ಜಗ್ಗಿ (56 ರನ್, 30 ಎಸೆತ,3 ಬೌಂಡರಿ, 6 ಸಿಕ್ಸರ್) ಅರ್ಧಶತಕದ ಕೊಡುಗೆಯ ನೆರವಿನಿಂದ 13.4 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು.
ಕಳೆದ ಪಂದ್ಯದಲ್ಲಿ ಅಜೇಯ 74 ರನ್ ಗಳಿಸಿದ್ದ ವಿರಾಟ್ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲೂ ಉತ್ತಮ ಪ್ರದರ್ಶನ ಮುಂದುವರಿಸಿದರು. ಅರುಣ್ ಕಾರ್ತಿಕ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ವಿರಾಟ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ವಿರಾಟ್-ಅರುಣ್ ಜೋಡಿ ಮೊದಲ ಐದು ಓವರ್‌ಗಳಲ್ಲಿ 61 ರನ್ ಗಳಿಸಿತು. ಕಾರ್ತಿಕ್ 14 ಎಸೆತಗಳಲ್ಲಿ 24 ರನ್ ಸೇರಿಸಿದರು. ಕಾರ್ತಿಕ್ ಔಟಾದ ಬಳಿಕ ವಿರಾಟ್‌ರೊಂದಿಗೆ ಕೈಜೋಡಿಸಿದ ಇಶಾಂಕ್ ಜಗ್ಗಿ ಎರಡನೆ ವಿಕೆಟ್‌ಗೆ 80 ರನ್ ಸೇರಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದರು.
ಪಶ್ಚಿಮ ವಲಯ 149/5: ಇದಕ್ಕೆ ಮೊದಲು ಸತತ ನಾಲ್ಕನೆ ಬಾರಿ ಟಾಸ್ ಜಯಿಸಿದ ಪೂರ್ವ ವಲಯದ ನಾಯಕ ಮನೋಜ್ ತಿವಾರಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.
ಪಶ್ಚಿಮ ವಲಯದ ಪಾರ್ಥಿವ್ ಪಟೇಲ್(17) ಹಾಗೂ ಶೆಲ್ಡನ್ ಜಾನ್ಸನ್(52,44 ಎಸೆತ, 5 ಬೌಂಡರಿ, 2 ಸಿಕ್ಸರ್) 4.4 ಓವರ್‌ಗಳಲ್ಲಿ 35 ರನ್ ಗಳಿಸಿ ಎಚ್ಚರಿಕೆಯ ಆರಂಭ ನೀಡಿದರು. ನಾಯಕ ಪಟೇಲ್ ಹಾಗೂ ಆದಿತ್ಯ ತಾರೆ(1) 4 ಎಸೆತಗಳಲ್ಲಿ ಔಟಾದಾಗ ಪಶ್ಚಿಮ ವಲಯ 36 ರನ್‌ಗೆ 2 ವಿಕೆಟ್ ಕಳೆದುಕೊಂಡಿತು.
ದೀಪಕ್ ಹೂಡಾ(36) ಜಾಕ್ಸನ್‌ರೊಂದಿಗೆ ಇನಿಂಗ್ಸ್ ಆಧರಿಸಿದರು. 5.2 ಓವರ್‌ಗಳಲ್ಲಿ 53 ರನ್ ಕಲೆಹಾಕಿದ ಪಾರೆಕ್ ಮಂಕಡ್(20 ರನ್) ಹಾಗೂ ರಾಜುಲ್ ಭಟ್(36 ರನ್, 20 ಎಸೆತ) ತಂಡವನ್ನು 150ರ ಗಡಿ ತಲುಪಿಸಿದರು.
ಪೂರ್ವ ವಲಯದ ಪರ ಪ್ರೀತಮ್ ದಾಸ್(2-25) ಯಶಸ್ವಿ ಬೌಲರ್ ಎನಿಸಿಕೊಂಡರು. ಸೂರ್ಯಕಾಂತ್ ಪ್ರಧಾನ್, ಪ್ರಗ್ಯಾನ್ ಓಜಾ ಹಾಗೂ ಘೋಷ್ ತಲಾ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಪಶ್ಚಿಮ ವಲಯ: 20 ಓವರ್‌ಗಳಲ್ಲಿ 149/5
(ಶೆಲ್ಡನ್ ಜಾಕ್ಸನ್ 52, ಪ್ರೀತಮ್ ದಾಸ್ 2-25)
ಪೂರ್ವ ವಲಯ: 13.4 ಓವರ್‌ಗಳಲ್ಲಿ 153/2
(ವಿರಾಟ್ ಸಿಂಗ್ ಅಜೇಯ 58, ಇಶಾಂಕ್ ಜಗ್ಗಿ 56)
ಕೇಂದ್ರ ವಲಯಕ್ಕೆ ದ್ವಿತೀಯ ಸ್ಥಾನ
ದಕ್ಷಿಣ ವಲಯ ತಂಡವನ್ನು 2 ವಿಕೆಟ್‌ಗಳ ಅಂತರದಿಂದ ರೋಚಕವಾಗಿ ಮಣಿಸಿದ ಕೇಂದ್ರ ವಲಯ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟೂರ್ನಿಯಲ್ಲಿ ರನ್ನ್ರರ್‌ಅಪ್ ಪ್ರಶಸ್ತಿ ಪಡೆಯಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ವಲಯ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 181 ರನ್ ಗಳಿಸಿತು. ಶಂಕರ್(40), ಕಾರ್ತಿಕ್(35), ದೇಶಪಾಂಡೆ(33), ವಿಷ್ಣುವಿನೋದ್(31) ಅಮೂಲ್ಯ ಕೊಡುಗೆ ನೀಡಿದ್ದರು.
ಗೆಲ್ಲಲು ಕಠಿಣ ಸವಾಲು ಪಡೆದಿದ್ದ ಕೇಂದ್ರ ವಲಯಕ್ಕೆ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್ ಹರ್‌ಪ್ರೀತ್ ಸಿಂಗ್(92 ರನ್, 51 ಎಸೆತ, 10 ಬೌಂಡರಿ, 4 ಸಿಕ್ಸರ್) ಗೆಲುವಿನ ರೂವಾರಿಯಾದರು. ಸಿಂಗ್ 2ನೆ ವಿಕೆಟ್‌ಗೆ ಖರೆ(39) ಅವರೊಂದಿಗೆ 67 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಕೇಂದ್ರ ವಲಯ 8 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ ಗೆಲುವಿನ ನಗೆ ಬೀರಿತು.







