ಶಿವಸೇನೆಯಿಂದ ಉರ್ದು ಜಾಹೀರಾತು
ಮುಂಬೈ,ಫೆ.18: ದೇಶದಲ್ಲಿಯೇ ಅತ್ಯಧಿಕ, ಒಟ್ಟು ತೆರಿಗೆಯ ಸುಮಾರು ಶೇ.40ರಷ್ಟು ಪಾಲು ಪಾವತಿಸುತ್ತಿರುವ ನಗರ ಮುಂಬೈ. ಆದರೂ ನಮ್ಮನ್ನು ಗುರಿಯಾಗಿಸಿಕೊಂಡು ‘ಸರ್ಜಿಕಲ್’ ದಾಳಿ ನಡೆಯುತ್ತಿದೆ. ಉದ್ಯಮ ಹಿನ್ನಡೆ ಕಂಡಿದೆ, ಉದ್ಯೋಗಗಳಿಗೆ ಕತ್ತರಿ ಬಿದ್ದಿದೆ, ಬಡವರು ಸರದಿ ಸಾಲುಗಳಲ್ಲಿಯೇ ಸಾಯುತ್ತಿದ್ದಾರೆ...
ಇದು ಶಿವಸೇನೆ ಬಿಎಂಸಿ ಚುನಾವಣೆಯಲ್ಲಿ ತನ್ನ ಅತ್ಯಂತ ದೊಡ್ಡ ಶತ್ರು ಬಿಜೆಪಿಯನ್ನು ಗುರಿಯಾಗಿಸಿಕೊಂಡು ಶುಕ್ರವಾರ ದೈನಿಕಗಳಲ್ಲಿ ನೀಡಿರುವ ಜಾಹೀರಾತು.
ಇದೇನು ಮಹಾ ಎನ್ನುತ್ತೀರಾ? ಕುತೂಹಲದ ಸಂಗತಿ ಇಲ್ಲಿದೆ. ಈ ಜಾಹೀರಾತು ಕಾಣಿಸಿಕೊಂಡಿದ್ದು ಮುಂಬೈಯಲ್ಲಿ ಪ್ರಕಟಗೊಳ್ಳುತ್ತಿರುವ ಉರ್ದು ದೈನಿಕಗಳಲ್ಲಿ... ಅದೂ ಉರ್ದು ಭಾಷೆಯಲ್ಲಿ!
ಚುನಾವಣಾ ಕಣದಲ್ಲಿರುವ 220ಕ್ಕೂ ಅಧಿಕ ಶಿವಸೇನೆ ಅಭ್ಯರ್ಥಿಗಳಲ್ಲಿ ಮುಸ್ಲಿಮರ ಸಂಖ್ಯೆ ಕೇವಲ ಐದೇ ಆಗಿದ್ದರೂ ಪಕ್ಷವು ಮುಸ್ಲಿಮ್ ಸಮುದಾಯವನ್ನು ತಲುಪಲು ಈಗ ನಡೆಸುತ್ತಿರುವ ಪ್ರಯತ್ನಗಳನ್ನು ಹಿಂದೆಂದೂ ಮಾಡಿರಲಿಲ್ಲ. ಉರ್ದು ಪತ್ರಿಕೆಗಳಲ್ಲಿಯ ಜಾಹೀರಾತು ಇದಕ್ಕೊಂದು ನಿದರ್ಶನವಾಗಿದೆ.
ಬಿಎಂಸಿ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ಶಿವಸೇನೆ ಮತ್ತು ಬಿಜೆಪಿ ನಿರ್ಧರಿಸಿದಾಗಿನಿಂದ ಸೇನೆಯ ಕೆಲವು ನಾಯಕರು ಮುಸ್ಲಿಮರಿಗೆ ಹತ್ತಿರವಾಗುತ್ತಿದ್ದಾರೆ. ‘‘ಇನ್ನಷ್ಟು ಹೆಚ್ಚಿನ ಸ್ಥಾನಗಳನ್ನು, ವಿಶೇಷವಾಗಿ ಗೋವಂಡಿ-ಮಾಂಖುರ್ದ್(ಮುಸ್ಲಿಂ ಬಾಹುಳ್ಯದ ಪ್ರದೇಶ)ನಲ್ಲಿ ಗೆಲ್ಲುವ ಪ್ರಯತ್ನ ನಮ್ಮದು. ಹಾಜಿ ಅರಾಫತ್ ಮತ್ತು ನಾನು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದೇವೆ ಮತ್ತು ನಮಗೆ ಭಾರೀ ಧನಾತ್ಮಕ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಸಾರಿಗೆ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಪಕ್ಷದ ಘಟಕ ಮಹಾರಾಷ್ಟ್ರ ಶಿವ ವಾಹತೂಕ್ ಸೇನಾದ ಉಪಾಧ್ಯಕ್ಷ ಸಾಜಿದ್ ಸುಪಾರಿವಾಲಾ ಹೇಳಿದರು. ಹಾಜಿ ಅರಾಫತ್ ಇದರ ಅಧ್ಯಕ್ಷರಾಗಿದ್ದಾರೆ.
ಹಾಲಿ ಕಾಂಗ್ರೆಸ್ ಕಾರ್ಪೊರೇಟರ್ ಶಹಾನಾ ರಿಝ್ವೆನ್ ಖಾನ್ ಅವರು ಶುಕ್ರವಾರ ಶಿವಸೇನೆಗೆ ಸೇರ್ಪಡೆಗೊಂಡಿರುವುದು ಪಕ್ಷಕ್ಕೆ ಹೆಚ್ಚಿನ ಹುಮ್ಮಸ್ಸು ನೀಡಿದೆ.





