ಚುನಾವಣಾ ಪ್ರಚಾರ ಸಾಮಗ್ರಿಗಳ ವ್ಯಾಪಾರಕ್ಕೆ ಹಿನ್ನಡೆ
ನೋಟು ರದ್ದತಿ, ಆರ್ಥಿಕ ದಿಗ್ಬಂಧದ ಕಾರಣ
ಇಂಫಾಲ್, ಫೆ.18: ಮಣಿಪುರದಲ್ಲಿ ಈಗ ನಡೆಯುತ್ತಿರುವ ಆರ್ಥಿಕ ದಿಗ್ಬಂಧ ಮತ್ತು ನೋಟು ರದ್ದತಿ ಕಚ್ಚಾ ವಸ್ತುಗಳ ಕೊರತೆಗೆ ಕಾರಣವಾಗಿದ್ದು, ಇದರಿಂದ ಮತದಾನಕ್ಕೆೆ ಸಂಬಂಧಿಸಿದ ಸಾಮಗ್ರಿಗಳ ವ್ಯವಹಾರ ನಡೆಸುತ್ತಿರುವ ವ್ಯಾಪಾರಿಗಳಿಗೆ ಇಮ್ಮಡಿ ಆಘಾತವಾಗಿದೆ. ಪ್ರತೀ ಬಾರಿ ಚುನಾವಣೆಯ ಸಂದರ್ಭ ಮತದಾನಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಉತ್ಪಾದಿಸುವ ಉದ್ದೇಶದಿಂದ ಬಹಳಷ್ಟು ಕಚ್ಚಾ ವಸ್ತುಗಳನ್ನು ತರುತ್ತೇವೆ. ಆದರೆ ಇದೇ ಮೊದಲ ಬಾರಿ ಈ ರೀತಿ ಮಾಡಲಾಗಿಲ್ಲ. ನೋಟು ರದ್ದುಗೊಳಿಸಿದ್ದು ಮತ್ತು ಆರ್ಥಿಕ ದಿಗ್ಬಂಧದ ಕಾರಣ ನಮ್ಮಲ್ಲಿ ಆರಂಭದಲ್ಲಿ ಹಣದ ಕೊರತೆಯಾಗಿದೆ.ಆದ್ದರಿಂದ ಈ ಸಾಮಗ್ರಿಗಳ ವ್ಯವಹಾರ ಸಾಧ್ಯವಾಗುತ್ತಿಲ್ಲ ಎಂದು ಇಂಫಾಲದ ಓರ್ವ ವ್ಯಾಪಾರಿ ತಿಳಿಸಿದ್ದಾರೆ. ಚುನಾವಣಾ ಪ್ರಚಾರ ಸಾಮಗ್ರಿಗಳಾದ ಪೋಸ್ಟರ್‌ಗಳು, ಫ್ಲೆಕ್ಸ್, ಪಕ್ಷದ ಚಿಹ್ನೆ ಮುದ್ರಿಸಲಾದ ಧ್ವಜಗಳಿಗೆ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಂದ ಭಾರೀ ಬೇಡಿಕೆ ಇರುತ್ತದೆ. ಆದರೆ ಈ ಬಾರಿ ಈ ವಸ್ತುಗಳ ಬೇಡಿಕೆ ಮತ್ತು ಪೂರೈಕೆ ಎರಡಕ್ಕೂ ಭಾರೀ ಹೊಡೆತ ಬಿದ್ದಿದೆ. ಸರಕಾರ 1000 ಮತ್ತು 500 ರೂ. ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ವ್ಯಾಪಾರಿಗಳ ಬಳಿ ಸಾಕಷ್ಟು ಮೊತ್ತದ ಹೊಸ ಕರೆನ್ಸಿ ನೋಟುಗಳು ಇಲ್ಲದಿದ್ದ ಕಾರಣ ಚುನಾವಣಾ ಸಾಮಗ್ರಿಗಳನ್ನು ತಯಾರಿಸುವ ಕಾರ್ಮಿಕರಿಗೆ ಸಂಬಳ ನೀಡುವುದಕ್ಕೆ ಸಮಸ್ಯೆಯಾಗಿತ್ತು. ಇದರಿಂದ ಈ ವಸ್ತುಗಳ ಉತ್ಪಾದನೆ ಬಹುತೇಕ ಸ್ಥಗಿತವಾಗಿತ್ತು. ನವೆಂಬರ್ 1ರಿಂದ ಆರ್ಥಿಕ ದಿಗ್ಬಂಧ ಆರಂಭವಾಗಿದೆ. ಜನವರಿ ಬಳಿಕ ನೋಟು ಅಮಾನ್ಯದಿಂದ ಹದಗೆಟ್ಟಿದ್ದ ಪರಿಸ್ಥಿತಿ ಬಹುತೇಕ ಸಹಜಸ್ಥಿತಿಗೆ ಬಂದರೂ, ಆರಂಭಿಕ ಹಂತದಲ್ಲಿ ಹಣದ ಕೊರತೆಯಿದ್ದ ಕಾರಣ ನಮಗೆ ಅಗತ್ಯವಿದ್ದ ಕಚ್ಚಾ ವಸ್ತುಗಳನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ ಈ ಬಾರಿ ಚುನಾವಣಾ ಖರ್ಚು ವೆಚ್ಚದ ಮೇಲೆ ಚುನಾವಣಾ ಆಯೋಗವು ಹದ್ದಿನ ಕಣ್ಣು ಇರಿಸಿರುವ ಕಾರಣ ರಾಜಕೀಯ ಪಕ್ಷಗಳು ಹೆಚ್ಚು ಹಣ ಖರ್ಚು ಮಾಡಲು ಸಾಧ್ಯವಾಗುತ್ತಿಲ್ಲ.





