ಉಡುಪಿ: ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ ಕಿರಿಯ ಕ್ರೀಡಾಪಟುಗಳ ಆಯ್ಕೆ
ಉಡುಪಿ, ಫೆ.18: 2017-18ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಜೂ.1ರಿಂದ 8ನೇ ತರಗತಿ ಪ್ರವೇಶಕ್ಕೆ ಅರ್ಹತೆ ಹೊಂದುವ (01-06-2003ರ ನಂತರ ಜನಿಸಿದ) 14 ವರ್ಷದೊಳಗಿನ ಬಾಲಕ/ಬಾಲಕಿಯರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆಯುತ್ತಿರುವ ಕ್ರೀಡಾ ವಸತಿ ನಿಲಯ ಪ್ರವೇಶಕ್ಕೆ ಆಯ್ಕೆ ಮಾಡಲಾಗುವುದು.
ಪ್ರತಿಭಾವಂತ ಕ್ರೀಡಾಪಟುಗಳ ತಾಲೂಕು ಮಟ್ಟದ ಆಯ್ಕೆ ಪ್ರಕ್ರಿಯೆಯು ಫೆ.20ರಂದು ಉಡುಪಿಯ ಮಹಾತ್ಮಗಾಂದಿ ಜಿಲ್ಲಾ ಕ್ರೀಡಾಂಗಣದಲ್ಲಿ, ಫೆ.21ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ, ಫೆ.22ರಂದು ಬೈಂದೂರು ಸರಕಾರಿ ಜೂನಿಯರ್ ಕಾಲೇಜಿನ ಎದುರಿನ ಗಾಂಧಿ ಮೈದಾನದಲ್ಲಿ, ಫೆ.23ರಂದು ಕಾರ್ಕಳ ಗಾಂಧಿ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆ ಫೆ.27ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ತಾಲೂಕು ಕೇಂದ್ರಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಫೆ.27ರಂದು ನಡೆಯುವ ಜಿಲ್ಲಾಮಟ್ಟದ ಆಯ್ಕೆಯಲ್ಲಿ ಕಡ್ಡಾಯವಾಗಿ ಬಾಗವಹಿಸಿ ಅಂತಿಮವಾಗಿ ಆಯ್ಕೆಯಾದಲ್ಲಿ ಮಾತ್ರ ಉಡುಪಿ ಜಿಲ್ಲೆಯ ಕ್ರೀಡಾನಿಲಯಕ್ಕೆ ಸೇರಲು ಅರ್ಹತೆ ಹೊಂದುತ್ತಾರೆ. ಕ್ರೀಡಾಪಟುಗಳು ಆಯ್ಕೆ ಪರೀಕ್ಷೆಗೆ ಬರು ವಾಗ ಕ್ರೀಡಾ ಸಮವಸ್ತ್ರದೊಂದಿಗೆ ಕಡ್ಡಾಯವಾಗಿ ಭಾಗವಹಿಸಬೇಕು.
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು 2017ರ ಜೂನ್ 1ಕ್ಕೆ 14 ವರ್ಷ ಮೀರಿರಬಾರದು. 2016-17ನೇ ಸಾಲಿನಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿರಬೇಕು ಹಾಗೂ 2017-18ನೇ ಸಾಲಿಗೆ 8ನೇ ತರಗತಿ ಸೇರಲು ಅರ್ಹತೆ ಹೊಂದಿರಬೇಕು.
ಆಯ್ಕೆಗೆ ಬರುವಾಗ ಜನನ ದಿನಾಂಕ ಪ್ರಮಾಣ ಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರಿಂದ ದೃಢೀಕರಿಸಿ, ಮನೆ ವಿಳಾಸದೊಂದಿಗೆ (ದೂರವಾಣಿ ಸಂಖ್ಯೆ) ನಮೂದಿಸಿ ತರಬೇಕು.ಇನ್ನೂ ಹೆಚ್ಚಿನ ಮಾಹಿತಿಗೆ ಅನಂತರಾಮ್:9448984729, ಮನೋಜ್ ಕುಮಾರ್:9743374795 ಇವರನ್ನು ಅಥವಾ ಕಚೇರಿ ದೂರವಾಣಿ ಸಂಖ್ಯೆ: 0820-2521324ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.







